ಮುಂಬೈ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಚಾರ ಸಭೆಗಳಲ್ಲಿ ಕೆಂಪು ಹೊದಿಕೆ ಇರುವ, ಸಂವಿಧಾನದ ಚಿಕ್ಕ ಪುಸ್ತಕವನ್ನು ಏಕೆ ಪ್ರದರ್ಶಿಸುತ್ತಾರೆ ಎಂದು ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪ್ರಶ್ನಿಸಿದ್ದಾರೆ.
ಈ ವಿಚಾರವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಫಡಣವೀಸ್, 'ಕೆಂಪು ಬಣ್ಣದ ಚಿಕ್ಕ ಪುಸ್ತಕವನ್ನು ಪ್ರದರ್ಶಿಸುವುದರ ಹಿಂದಿನ ತರ್ಕವೇನು' ಎಂದು ಪ್ರಶ್ನಿಸಿದ್ದಾರೆ.
'ಸಂವಿಧಾನದ ಪ್ರತಿಯ ಹೊದಿಕೆಯ ಬಣ್ಣ ಸಾಮಾನ್ಯವಾಗಿ ನೀಲಿ ಇರುತ್ತದೆ. ಆದರೆ, ರಾಹುಲ್ ಗಾಂಧಿ ಪ್ರದರ್ಶಿಸುವ ಪುಸ್ತಕದ ಬಣ್ಣ ಕೆಂಪು ಬಣ್ಣ ಹೊಂದಿದೆ. ಈಗ, ರಾಹುಲ್ ಗಾಂಧಿ ಸುತ್ತ ನಗರ ನಕ್ಸಲರು ಹಾಗೂ ಅರಾಜಕತಾವಾದಿ ಶಕ್ತಿಗಳೇ ಇದ್ದಾರೆ. ಅವರು ಕಾಂಗ್ರೆಸ್ ವ್ಯಕ್ತಿಯಾಗಿ ಉಳಿಯದೇ ಈಗ 'ಉಗ್ರ ಎಡಪಂಥೀಯ ವಿಚಾರವಾದಿ'ಯಾಗಿ ಬದಲಾಗಿದ್ದಾರೆ' ಎಂದು ಟೀಕಿಸಿದ್ದಾರೆ.
'ಕೆಂಪು ಬಣ್ಣದ ಹೊದಿಕೆ ಇರುವ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುವ ಮೂಲಕ ರಾಹುಲ್ ಗಾಂಧಿ ಯಾವ ಸಂದೇಶ ಕೊಡಲು ಹೊರಟಿದ್ದಾರೆ' ಎಂದು ಕೊಲ್ಹಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಫಡಣವೀಸ್ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರು ಮಹಾ ವಿಕಾಸ ಅಘಾಡಿ (ಎಂವಿಎ) ಪರ ಪ್ರಚಾರ ನಡೆಸುವುದಕ್ಕಾಗಿ ನಾಗ್ಪುರ ಹಾಗೂ ಮುಂಬೈನಲ್ಲಿ ನಡೆದ ರ‍್ಯಾಲಿಗಳಲ್ಲಿ ಪಾಲ್ಗೊಂಡಿರುವ ಸಂದರ್ಭದಲ್ಲಿಯೇ ಫಡಣವೀಸ್ ಈ ವಾಗ್ದಾಳಿ ನಡೆಸಿದ್ದಾರೆ.
'ರಾಹುಲ್ ಗಾಂಧಿ ಮಾಡಿಕೊಂಡಿರುವ ಮೈತ್ರಿಕೂಟ ಮಹಾರಾಷ್ಟ್ರ ಹಾಗೂ ಇಡೀ ದೇಶಕ್ಕೆ ಅಪಾಯಕಾರಿ. ಅವರು ಭಾರತ ಜೋಡೊ ಯಾತ್ರೆ ಆರಂಭಿಸಿದರು. ಹೆಸರೂ ಆಕರ್ಷಕವಾಗಿತ್ತು. ಇದೊಂದು ಉತ್ತಮ ಕಾರ್ಯಕ್ರಮ ಎಂದೂ ನಾವು ಭಾವಿಸಿದ್ದೆವು' ಎಂದರು.
'ಭಾರತ ಜೋಡೊ ಯಾತ್ರೆಗೆ 150-200 ಸಂಘಟನೆಗಳು ಕೈಜೋಡಿಸಿದ್ದವು. ಇವುಗಳ ಪೈಕಿ 100ರಷ್ಟು ಸಂಘಟನೆಗಳು ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಯತ್ನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಈ ಸಂಘಟನೆಗಳೆಲ್ಲ ಉಗ್ರ ಎಡಪಂಥೀಯ ವಿಚಾರಧಾರೆ ಹೊಂದಿವೆ. ಸಮಾಜದಲ್ಲಿ ಒಡಕು ಉಂಟು ಮಾಡುವಲ್ಲಿ ಈ ಸಂಘಟನೆಗಳು ನಿರತವಾಗಿರುವುದು ಇವುಗಳ ಇತಿಹಾಸ ಗಮನಿಸಿದಾಗ ಗೊತ್ತಾಗುತ್ತದೆ' ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ರಾಹುಲ್ ತಿರುಗೇಟು: ನಾಗ್ಪುರದಲ್ಲಿ ನಡೆದ ಸಂವಿಧಾನ ಸಮ್ಮಾನ ಕಾರ್ಯ ಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಕೇವಲ ಪುಸ್ತಕವಲ್ಲ, ಅದು ಜೀವನಮಾರ್ಗ. ಆದರ, 'ಬಿಜೆಪಿ, ಆರ್‌ಎಸ್‌ಎಸ್‌ನವರು ಸಂವಿಧಾನದ ಮೇಲೆ ಸದ್ದಿಲ್ಲದೇ ದಾಳಿ ನಡೆಸುತ್ತಿದ್ದಾರೆ' ಎಂದು ಟೀಕಿಸಿದರು.