ಕಾಸರಗೋಡು: ಮಡಿಕೇರಿ ಅಯ್ಯಂಗೇರಿ ನಿವಾಸಿ ಹಾಗೂ ಮುಳಿಯಾರು ಮಾಸ್ತಿಕುಂಡ್‍ನ ಗುತ್ತಿಗೆದಾರ ಕೆ.ಸಿ. ಹಂಸನ ಗೋವಾದಲ್ಲಿರುವ ಮನೆಯಲ್ಲಿ ಕೊಲೆಗೈಯ್ಯಲ್ಪಟ್ಟ ಸಫಿಯಾ (13)ಳ ಅಸ್ತಿಪಂಜರ (ತಲೆಬುರುಡೆ)ಯನ್ನು ಆಕೆಯ ತಂದೆ ಮೊಯ್ದು ಮತ್ತು ತಾಯಿ ಆಯಿಷಾ ಸೇರಿ ಮಂಗಳವಾರ ಬೆಳಿಗ್ಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯದಿಂದ ಪಡೆದುಕೊಂಡರು. ಪತ್ರಿಯ ಅಸ್ಥಿಪಂಜರ ಪಡೆಯುವ ವೇಳೆ ಆಕೆಯ ತಾಯಿ ಮತ್ತು ತಂದೆಗೆ ಉಕ್ಕಿ ಬಂದ ದುಃಖ ತಡೆಯಲಾಗದೆ ಕಣ್ಣೀರು ಸುರಿಸುತ್ತಾ ಬಿಕ್ಕಿ-ಬಿಕ್ಕಿ ಅಳತೊಡಗಿದ್ದು ಆ ವೇಳೆ ಅಲ್ಲಿ ನೆರೆದವರನ್ನೂ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಅಸ್ಥಿಪಂಜರವನ್ನು ನಂತರ ಆಂಬುಲೆನ್ಸ್‍ನಲ್ಲಿ ಸೀತಾಂಳಿಯಲ್ಲಿಯಲ್ಲಿರುವ ಮುಹಿದ್ದೀನ್ ಮಸೀದಿಗೆ ಕೊಂಡೊಯ್ದು, ಅಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಬಳಿಕ ಸಫಿಯಾಳ ಹುಟ್ಟೂರಾದ ಮಡಿಕೇರಿ ಅಯ್ಯಂಗೇರಿಗೆ ಸಾಗಿಸಿ ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಜುಮ್ಮಾ ಮಸೀದಿಯ ಅಂಗಳದಲ್ಲಿ ದಫನಗೈತ್ಯಲಾಯಿತು.
ಪ್ರಕರಣ ಏನಾಗಿತ್ತು?:
2006 ಡಿಸೆಂಬರ್ ತಿಂಗಳಲ್ಲಿ ಸಫಿಯಾ ಗೋವಾದಲ್ಲಿರುವ ಗುತ್ತಿಗೆದಾರ ಕೆ.ಸಿ. ಹಂಸನ ಮನೆಯಿಂದ ನಾಪತ್ತೆಯಾಗಿದ್ದಳು. ಬಳಿಕ 2008 ಜೂನ್ 5ರಂದು ಗೋವಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟಿನ ಬಳಿ ಆಕೆಯ ಅಸ್ಥಿಪಂಜರ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾದ ಗುತ್ತಿಗೆದಾರ ಕೆಸಿ ಹಂಸನಿಗೆ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ನಂತರ ಕೇರಳ ಹೈಕೋರ್ಟ್ ಆ ಶಿಕ್ಷೆಯನ್ನು ಜೀವಾವಧಿ ಸಜೆಯಾಗಿಸಿ ಶಿಕ್ಷೆಯಲ್ಲಿ ರಿಯಾಯಿತಿ ನೀಡಿತ್ತು. ಆತ ಈಗಲೂ ಜೈಲಿನಲ್ಲಿ ಕಳೆಯುತ್ತಿದ್ದಾನೆ. ಹಂಸನ ಪತ್ನಿ ಮೈಮೂನಾ ಆಕೆಯ ಸಹೋದರ ಅಬ್ದುಲ್ಲರಿಗೂ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿತ್ತು. ಆ ಶಿಕ್ಷೆಯನ್ನು ನಂತರ ಹೈಕೋರ್ಟ್ ರದ್ದುಪಡಿಸಿತ್ತು.