ನವದೆಹಲಿ: ಎಎಪಿ ಪಕ್ಷ ಮತ್ತು ದೆಹಲಿಯ ಸರ್ಕಾರದ ಸಾರಿಗೆ ಸಚಿವ ಸ್ಥಾನ ತೊರೆದ ಬೆನ್ನಲ್ಲೇ ಕೈಲಾಶ್ ಗೆಹಲೋತ್ ಬಿಜೆಪಿ ಪಕ್ಷ ಸೇರಿದ್ದಾರೆ.
ಕೇಂದ್ರ ಸಚಿವ ಮನೋಹರ ಲಾಲ್ ಖಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಸೇರಿ ಇತರ ನಾಯಕರ ಉಪಸ್ಥಿತಿಯಲ್ಲಿ ಗೆಹಲೋತ್ ಸೋಮವಾರ ಬಿಜೆಪಿಗೆ ಸೇರಿದರು.
'ಪಕ್ಷವು ವಿವಾದಗಳಿಗೆ ತುತ್ತಾಗಿರುವುದು ಹಾಗೂ ಭರವಸೆಗಳನ್ನು ಈಡೇರಿಸದೆ ಇರುವುದು ರಾಜೀನಾಮೆಗೆ ಕಾರಣ' ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಜೀನಾಮೆ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಅವರು, 'ಕೇಜ್ರಿವಾಲ್ ಅವರು ತಮ್ಮ ಹಿಂದಿನ ಸರ್ಕಾರಿ ನಿವಾಸದಲ್ಲಿ ಐಷಾರಾಮಿ ವಸ್ತುಗಳಿಗಾಗಿ ಕೋಟಿಗಟ್ಟಲೆ ಹಣ ವ್ಯಯಿಸಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಕೇಜ್ರಿವಾಲ್ ಅವರು ಇದ್ದ ಸರ್ಕಾರಿ ನಿವಾಸವನ್ನು ಬಿಜೆಪಿಯು 'ಶೀಷಮಹಲ್' ಎಂದು ಕರೆದಿತ್ತು' ಎಂದಿದ್ದಾರೆ.
'ಜನರ ಹಕ್ಕುಗಳಿಗಾಗಿ ಹೋರಾಟ ನಡೆಸುವ ಬದಲು ಎಎಪಿಯು ತನ್ನದೇ ಆದ ಕಾರ್ಯಸೂಚಿಗಾಗಿ ಹೋರಾಟ ನಡೆಸುತ್ತಿದೆ. ಈ ಕಾರಣದಿಂದಾಗಿ ದೆಹಲಿಯಲ್ಲಿ ಮೂಲ ಸೇವೆಗಳನ್ನು ಒದಗಿಸುವಲ್ಲಿ ಅಡಚಣೆ ಉಂಟಾಗಿದೆ' ಎಂದು ಗೆಹಲೋತ್ ದೂರಿದ್ದರು.
'ಎಎಪಿಯು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ, ರಾಜಕೀಯ ಮಹತ್ವಾಕಾಂಕ್ಷೆಗಳು ನಾವು ಜನರಿಗೆ ನೀಡಿದ್ದ ಭರವಸೆಗಳಿಗಿಂತ ದೊಡ್ಡದಾಗಿವೆ. ಇದರಿಂದಾಗಿ ಹಲವು ಭರವಸೆಗಳು ಈಡೇರಿಲ್ಲ' ಎಂದು ಗಹಲೋತ್ ಹೇಳಿದ್ದರು.