ಕಾಸರಗೋಡು: ಉದ್ಯೋಗ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಪ್ರಕರಣದ ಆರೋಪಿ, ಮಾಜಿ ಡಿವೈಎಫ್‍ಐ ನೇತಾರೆ ಹಾಗೂ ಪುತ್ತಿಗೆ ಪಂಚಾಯಿತಿ ಬಾಡೂರು ಎಎಲ್‍ಪಿ ಶಾಲಾ ಶಿಕ್ಷಕಿ ಸಚಿತಾ ರೈ (27) ವಿರುದ್ಧ ಮತ್ತೆ ಮೂರು ಕೇಸು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 20ಕ್ಕೇರಿದೆ. ಈ ಮೂಲಕ ಒಂದುವರೆ ಕೋಟಿ ರೂ.ಗೂ ಹೆಚ್ಚು ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.
ಪೆರುಆಯಿ ನಿವಸಿ ಪಿ. ರೇಣುಕಾ, ಎಣ್ಮಕಜೆ ಪಂಚಾಯಿತಿ ವಾಣೀನಗರ ಪಾಲೆಪ್ಪಾಡಿ ನಿವಾಸಿ ಪಿ. ಸತೀಶ, ವಾಣೀನಗರ ಪಾಲೆಪ್ಪಾಡಿ ನಿವಾಸಿ ರಾಜೇಶ್ ಎಂಬವರು ಬದಿಯಡ್ಕ ಠಾಣೆಗೆ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಕೆಲಸ ದೊರಕಿಸಿಕೊಡುವ ಭರವಸೆಯೊಂದಿಗೆ ಸಚಿತಾ 29ಲಕ್ಷ ರೂ. ಪಡೆದು ವಂಚಿಸಿರುವುದಾಗಿ ರಏಣುಕಾ ದೂರಿನಲ್ಲಿ ತಿಳಿಸಿದ್ದಾರೆ. ಸಿಪಿಸಿಆರ್‍ಐನಲ್ಲಿ ಚಾಲಕ ಹುದ್ದೆ ಭರವಸೆಯಲ್ಲಿ ಸತೀಶ್ ಅವರಿಂದ 5ಲಕ್ಷ ರೂ, ಸಿಪಿಸಿಆರ್‍ಐನಲ್ಲಿ ಕ್ಲರ್ಕ್ ಹುದ್ದೆ ದೊರಕಿಸಿಕೊಡುವ ಭರವಸೆಯಲ್ಲಿ ರಾಜೇಶ್ ಅವರಿಂದ 2.80ಲಕ್ಷ ರೂ. ಪಡೆದು ವಂಚಿಸಿರುವುದಾಗಿ ದೂರಲಾಗಿದೆ.
ಸಚಿತಾ ವಿರುದ್ಧ ಬದಿಯಡ್ಕ ಠಾಣೆಯಲ್ಲಿ 12, ಆದೂರು ಠಾಣೆಯಲ್ಲಿ 2, ಮಂಜೇಶ್ವರ, ಕುಂಬಳೆ, ಮೇಲ್ಪರಂಬ, ಅಂಬಲತ್ತರ, ಕಾಸರಗೋಡು ಹಾಗೂ ಉಪ್ಪಿನಂಗಡಿ ಠಾಣೆಯಲ್ಲಿ ತಲಾ ಒಂದು ಕೇಸು ದಾಖಲಾಗಿದೆ.
ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಸಚಿತಾ ರೈಗೆ ಕಾಸರಗೋಡು ಜ್ಯುಡಿಶಿಯಲ್ ಪ್ರಥಮ ದರ್ಜೆ ನ್ಯಾಯಾಲಯ(ಪ್ರಥಮ)ನ್ಯಾಯಾಂಗ ಬಂಧನ ವಿಧಿಸಿದ್ದು, ಪ್ರಸಕ್ತ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಕಳೆಯುತ್ತಿದ್ದಾಳೆ.