ಕಾಸರಗೋಡು : ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ ಮತ್ತು ನಮಸ್ಕಾರ ಮಂಟಪದ ಪುನ:ನಿರ್ಮಾಣ ಕಾರ್ಯಗಳಿಗೆ ನಿಧಿ ಸಂಗ್ರಹ ಕುರಿತು ಊರ ಪರವೂರ ಭಕ್ತ ಜನರ ಸಭೆಯನ್ನು ಎಡನೀರು ಮಠದ ಶ್ರೀ ಸಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭ ಅಸಿರ್ವಚನ ನೀಡಿದ ಅವರು, ದೇವಸ್ಥಾನಗಳ ಪುನ:ನವೀಕರಣ ಮಾಡುವುದರಿಂದ ಆ ಪ್ರದೇಶಗಳಲ್ಲಿ ಶಾಂತಿ, ನೆಮ್ಮದಿ ನೆಲೆಸುವುದಲ್ಲದೆ ಜನರಲ್ಲಿ ಧರ್ಮ ಜಾಗ್ರತಿ ಉಂಟು ಮಾಡಲು ಸಹಕಾರಿಯಾಗುವುದು. ಭಗವದ್ಭಕ್ತರು ಈ ಪುಣ್ಯ ಕಾರ್ಯಕ್ಕೆ ಹೆಚ್ಚಿನ ರೀತಿಯಲ್ಲಿ ದೇಣಿಗೆ ನೀಡಿ ಜೀರ್ಣೋದ್ದಾರ ಕಾರ್ಯಗಳು ಸಾಂಗವಾಗಿ ನಡೆಸಲು ಸಹಕಾರ ನೀಡುವಂತೆ ಸೂಚಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಅನುವಂಶಿಕ ಮೊಕ್ತೆಸರ ಸುಧಾಕರ ಕೋಟೆ ಕುಂಜಾತ್ತಾಯ, ಹಿರಿಯ ವಕೀಲ ಕೆ. ಮಹಾಬಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿಶಂಕರ ಕಾಮತ್, ಕ್ಷೇತದ ಆಡಳಿತ ಮೊಕ್ತೆಸರ ಮಹಾಬಲ ನಾಯ್ಕ್ ಸೂರ್ಲು, ಸುಬ್ರಹ್ಮಣ್ಯ, ಲೀಲಾವತಿ ಚಟ್ಲ,
ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಕ್ಲಬ್ಬು, ಭಜನಾ ಮಂಡಳಿ, ಮಹಿಳಾ ಮಂಡಳಿ, ಮತ್ತಿತರ ಸಂಘ ಸಂಸ್ಥೆಗಳ ವತಿಯಿಂದ ಮತ್ತು ವೈಯಕ್ತಿವಾಗಿ ಹಲವಾರು ಮಂದಿ ಸಹಾಯ ಧನ ನೀಡುಗವ ಬಗ್ಗೆ ಬರವಸೆ ನೀಡಿದರು. ಕಾರ್ಯದರ್ಶಿ ಮನೋಹರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು.