ತಿರುವಲ್ಲ/ಕಾಸರಗೋಡು: ಕಾಸರಗೋಡಿನ ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತಿ ಸ್ವಾಮಿಗಳ ವಾಹನದ ಮೇಲೆ ನಡೆದ ದಾಳಿಯನ್ನು ಖಂಡಿಸಿ ಯೋಗ ಕ್ಷೇಮ ಸಭೆಯು ಪ್ರತಿಭಟನೆ ನಡೆಸಿತು.
ಆದಷ್ಟು ಶೀಘ್ರ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು ಎಂದು ಯೋಗ ಕ್ಷೇಮ ಸಭಾ ರಾಜ್ಯಾಧ್ಯಕ್ಷ ಅಕಿರಾಮನ್ ಕಾಳಿದಾಸ ಭಟ್ಟತ್ತಿರಿಪಾಡ್ ಆಗ್ರಹಿಸಿದರು.
ಯೋಗ ಕ್ಷೇಮ ಸಭೆಯು ಇದನ್ನು ಸಮಾಜದಲ್ಲಿ ಮತೀಯವಾದವನ್ನು ಹುಟ್ಟುಹಾಕುವ ಕಾರ್ಯವೆಂದು ಪರಿಗಣಿಸುತ್ತದೆ. ಆರೋಪಿಗಳನ್ನು ಹಿಡಿಯದಿದ್ದಲ್ಲಿ ಹಿಂದೂ ಸಂಘಟನೆಗಳೊಂದಿಗೆ ಸೇರಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಅಕಿರಾಮನ್ ಕಾಳಿದಾಸ ಭಟ್ಟತ್ತಿರಿಪಾಡ್ ಹೇಳಿದರು.
ನವೆಂಬರ್ 3ರ ಭಾನುವಾರ ಕಾಸರಗೋಡಿನ ಬೋವಿಕ್ಕಾನದಲ್ಲಿ ಎಡನೀರು ಮಠದ ಮುಖ್ಯಸ್ಥ ಸಚ್ಚಿದಾನಂದ ಭಾರತಿ ಸ್ವಾಮಿಗಳ ವಾಹನದ ಮೇಲೆ ದಾಳಿ ನಡೆದಿತ್ತು. ಜನರ ಗುಂಪೆÇಂದು ಸ್ವಾಮೀಜಿ ಅವರ ಕಾರನ್ನು ತಡೆದು ಕಾರಿಗೆ ಘಾಸಿಗೊಳಿಸಿ ಅವಮಾನಿಸಿತ್ತು.
ಕಾಸರಗೋಡಿನ ಬೋವಿಕ್ಕಾನ-ಇರಿಯಣ್ಣಿ ರಸ್ತೆಯಲ್ಲಿ ಸ್ವಾಮೀಜಿಯವರ ಕಾರಿನ ಮೇಲೆ ದಾಳಿ ನಡೆದಿದೆ. ಯುವಕರು ಸ್ವಾಮೀಜಿ ವಾಹನ ತಡೆದು ಲಾಠಿ ಬೀಸಿ ಕಾರಿನ ಗಾಜಿಗೆ ಹಾನಿ ಎಸಗಿದ್ದರು.
ಸ್ವಾಮೀಜಿಗೆ ಯಾವುದೇ ಗಾಯವಾಗಿಲ್ಲ. ಹಲವಾರು ಹಿಂದೂಪರ ಸಂಘಟನೆಗಳು ಘಟನೆಯನ್ನು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ. ಬೋವಿಕ್ಕಾನ ಹಾಗೂ ಬದಿಯಡ್ಕದಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಹಿಂದೂ ಐಕ್ಯವೇದಿ ಸ್ವಾಮೀಜಿಯವರಿಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ಒತ್ತಾಯಿಸಿದೆ.