ನವದೆಹಲಿ: ಜನರಿಂದ ಅನೇಕ ಬಾರಿ ತಿರಸ್ಕೃತಗೊಂಡವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಗೂಂಡಾಗಿರಿ ಮಾಡುವ ಮೂಲಕ ಸಂಸತ್ತಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಚಳಿಗಾಲದ ಅಧಿವೇಶನ ಆರಂಭವಾಗುವ ಮುನ್ನ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿ ವರ್ತನೆ ತೋರುವ ಜನರು ತಮ್ಮ ಉದ್ದೇಶಗಳಲ್ಲಿ ಯಶಸ್ವಿಯಾಗಲೇ ಇಲ್ಲ. ಮತದಾರರು ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದೂ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಆದರೆ ಪ್ರತಿಪಕ್ಷಗಳ ಮೈತ್ರಿಕೂಟವು 49 ಸ್ಥಾನಗಳಿಗೆ ತೃಪ್ತಿಪಟ್ಟಿವೆ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು ಆದರೆ, ಕೆಲವು ವ್ಯಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಅಡೆತಡೆಯೊಡ್ಡಲು ಹಾಗೂ ಅವ್ಯವಸ್ಥೆ ಸೃಷ್ಟಿಸಲು ಬಯಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅವರ (ವಿರೋಧ ಪಕ್ಷಗಳ) ನಡವಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಸಮಯ ಬಂದಾಗ ಉತ್ತರ ನೀಡುತ್ತಾರೆ ಎಂದು ಕುಟುಕಿದರು.
ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು(ಸೋಮವಾರ)ಆರಂಭವಾಗಿದ್ದು, ಡಿಸೆಂಬರ್ 20ರವರೆಗೆ ನಡೆಯಲಿದೆ .