ನವದೆಹಲಿ: ಅತ್ಯಾಚಾರದಂತಹ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಪಡಿಸಬೇಕೆಂದು ಕೋರುವ ಅರ್ಜಿಯನ್ನು ಮಾನ್ಯ ಮಾಡುವ ಮೊದಲು, ಆರೋಪಿ ಹಾಗೂ ಸಂತ್ರಸ್ತೆಯ ಮಧ್ಯೆ ನಿಜಕ್ಕೂ ರಾಜಿ ಏರ್ಪಟ್ಟಿದೆ ಎಂಬುದನ್ನು ಹೈಕೋರ್ಟ್ ಖಾತರಿಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜಿ ನಿಜಕ್ಕೂ ಆಗಿದೆ ಎಂಬುದನ್ನು ಕೋರ್ಟ್ ಖಾತರಿಪಡಿಸಿಕೊಳ್ಳದ ಹೊರತು, ಪ್ರಕರಣ ರದ್ದುಪಡಿಸುವಂತೆ ಕೋರುವ ಅರ್ಜಿ ವಿಚಾರವಾಗಿ ಮುಂದಡಿ ಇರಿಸಲಾಗದು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ರಾಜಿಗೆ ಸಂತ್ರಸ್ತೆ ಒಪ್ಪಿದ್ದಾಳೆ ಎಂಬುದಾಗಿ ಹೇಳುವ ಪ್ರಮಾಣಪತ್ರವು ಎದುರಿಗೆ ಇದ್ದರೂ, ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಹಾಗೂ ಮುಖ್ಯವಾಗಿ ಮಹಿಳೆಯರ ವಿರುದ್ಧ ಅಪರಾಧ ನಡೆದ ಪ್ರಕರಣಗಳಲ್ಲಿ, ಸಂತ್ರಸ್ತೆಯನ್ನು ಖುದ್ದಾಗಿ ಅಥವಾ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಬರುವಂತೆ ಹೇಳುವುದು ಸೂಕ್ತ. ನಿಜಕ್ಕೂ ರಾಜಿ ಆಗಿದೆಯೇ, ಸಂತ್ರಸ್ತೆಯ ಮನಸ್ಸಿನಲ್ಲಿ ಅಸಮಾಧಾನ ಉಳಿದುಕೊಂಡಿಲ್ಲವೇ ಎಂಬುದನ್ನು ಸರಿಯಾಗಿ ಪರಿಶೀಲಿಸಲು ಕೋರ್ಟ್‌ಗೆ ಆಗ ಸಾಧ್ಯವಾಗುತ್ತದೆ ಎಂದು ಪೀಠವು ವಿವರಣೆ ನೀಡಿದೆ.
ಗುಜರಾತ್ ಹೈಕೋರ್ಟ್ 2023ರ ಸೆಪ್ಟೆಂಬರ್ 29ರಂದು ನೀಡಿದ ಆದೇಶವನ್ನು ಪ್ರಶ್ನಿಸಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನವೆಂಬರ್ 5ರಂದು ನೀಡಿರುವ ತೀರ್ಪಿನಲ್ಲಿ ಮಾನ್ಯ ಮಾಡಿದೆ.
ಮಹಿಳೆಯು ತನಗೆ ಕೆಲಸ ನೀಡಿದ್ದವರ ವಿರುದ್ಧ ನೀಡಿದ್ದ ದೂರಿನ ಆಧಾರದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿತ್ತು. ರಾಜಿ ಆಗಿದೆ ಹಾಗೂ ಸಂತ್ರಸ್ತೆಯ ಪತಿಗೆ ₹3 ಲಕ್ಷ ಪರಿಹಾರ ನೀಡಲಾಗಿದೆ ಎಂಬ ಆಧಾರದಲ್ಲಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ, ಹೈಕೋರ್ಟ್ ಈ ಕ್ರಮ ಕೈಗೊಂಡಿತ್ತು.
ಸಂತ್ರಸ್ತೆಯು ಅನಕ್ಷರಸ್ಥೆ, ಟೈಪ್ ಮಾಡಿದ ಪ್ರಮಾಣಪತ್ರದ ಮೇಲೆ ಅನುಮಾನಾಸ್ಪದ ಸಂದರ್ಭದಲ್ಲಿ ಆಕೆಯಿಂದ ಹೆಬ್ಬೆರಳಿನ ಅಚ್ಚನ್ನು ಪಡೆದುಕೊಳ್ಳಲಾಗಿದೆ ಎಂದು ಆಕೆಯ ಪರ ವಕೀಲರು ಪೀಠಕ್ಕೆ ವಿವರ ನೀಡಿದ್ದರು. 'ಅನಕ್ಷರಸ್ಥರು ಇಂತಹ ಪ್ರಮಾಣಪತ್ರಕ್ಕೆ ಹೆಬ್ಬೆಟ್ಟು ಒತ್ತಿದಾಗ, ಪ್ರಮಾಣಪತ್ರದಲ್ಲಿ ಏನಿತ್ತು ಎಂಬುದನ್ನು ಅವರಿಗೆ ಓದಿ ವಿವರಿಸಲಾಗಿತ್ತು ಎನ್ನುವ ಹಿಂಬರಹವೂ ಇರಬೇಕು' ಎಂದು ಪೀಠ ಹೇಳಿದೆ.
ಇಂತಹ ಹಿಂಬರಹ ಇಲ್ಲ ಎಂಬುದನ್ನು ಗಮನಿಸಿ ಹೈಕೋರ್ಟ್, ಸಂತ್ರಸ್ತೆಯು ಖುದ್ದಾಗಿ ಹಾಜರಾಗಬೇಕು ಎಂಬ ಸೂಚನೆ ನೀಡಬೇಕಿತ್ತು. ಆಗ ಪ್ರಮಾಣಪತ್ರದಲ್ಲಿನ ವಿವರಗಳನ್ನು ಅರ್ಥ ಮಾಡಿಕೊಂಡ ನಂತರ ಆಕೆ ಹೆಬ್ಬೆಟ್ಟಿನ ಗುರುತು ನೀಡಿದ್ದಳೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಆಗುತ್ತಿತ್ತು ಎಂದು ಪೀಠವು ಹೇಳಿದೆ.
ಹೈಕೋರ್ಟ್ ಆದೇಶವನ್ನು ರದ್ದುಪಡಿಸಿರುವ ಪೀಠವು, ವಿಷಯವನ್ನು ಮತ್ತೆ ಹೈಕೋರ್ಟ್‌ಗೆ ವರ್ಗಾಯಿಸಿದೆ.