ಕಾಸರಗೋಡು: ಉದ್ಯೋಗ ಭರವಸೆ ನೀಡಿ ತನ್ನ ಪುತ್ರಿಯಿಂದ 12.70ಲಕ್ಷ ರೂ. ಪಡೆದು ವಂಚಿಸಿರುವುದರಿಂದ ಖಿನ್ನತೆಗೊಳಗಾಗಿ ಮಹಿಳೆ ನೇಣಿಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿ ಕೊಲೆಗೆ ಪ್ರೇರಣೆಗೆ ಸಂಬಂಧಿಸಿ ಸಚಿತಾ ರೈ ವಿರುದ್ಧ ಕೇಸು ದಾಖಲಿಸುವಂತೆ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಎಂ.ಎಲ್ ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರೋಜಿನಿ-ಅರವಿಂದಾಕ್ಷನ್ ದಂಪತಿ ಪುತ್ರಿ ಅಮೃತಾ ಅವರಿಂದ ಡಿವೈಎಫ್‍ಐ ಮಾಜಿ ನೇತಾರೆ ಸಚಿತಾ ರೈ, ಸಿಪಿಸಿಆರ್‍ಐನಲ್ಲಿ ಉದ್ಯೋಗ ನೀಡುವ ಭರವಸೆನೀಡಿ 12.70ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಬದಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪುತ್ರಿಗೆ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸರೋಜಿನಿ ತಮ್ಮ ಚಿನ್ನಾಭರಣ ಅಡವಿರಿಸಿ ಹಣ ತೆಗೆದುಕೊಟ್ಟಿದ್ದಾರೆನ್ನಲಾಗಿದೆ. ಈ ಹಣ ವಾಪಾಸು ಕೈಸೇರದೆ, ಉದ್ಯೋಗವೂ ಲಭಿಸದಿರುವುದರಿಂದ ಸರೋಜಿನಿ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಸಚಿತಾ ರೈ ವಿರುದ್ಧ ಆತ್ಮಹತ್ಯಾ ಪ್ರೇರಣೆಗೆ ಸಂಬಂಧಿಸಿ ಕೇಸು ದಾಖಲಿಸಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ನೇತಾರರ ಪರೋಕ್ಷ ಬೆಂಬಲವೇ ಸಚಿತಾಳ ವಂಚನಾ ಕೃತ್ಯಗಳಿಗೆ ಪ್ರೇರಣೆಯಾಗಿರುವುದಾಗಿಯೂ ಎಂ.ಎಲ್ ಅಶ್ವಿನಿ ತಿಳಿಸಿದ್ದಾರೆ.