ಢಾಕಾ: ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಸೇರಿದಂತೆ ಇಸ್ಕಾನ್ ಜತೆ ಗುರುತಿಸಿಕೊಂಡಿರುವ 17 ಮಂದಿಯ ಬ್ಯಾಂಕ್ ಖಾತೆಗಳನ್ನು 30 ದಿನಗಳವರೆಗೆ ಸ್ಥಗಿತಗೊಳಿಸುವಂತೆ ಬಾಂಗ್ಲಾದೇಶದ ಹಣಕಾಸು ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
'ಬಾಂಗ್ಲಾದೇಶ ಬ್ಯಾಂಕ್‌ನ ಹಣಕಾಸು ಗುಪ್ತಚರ ಘಟಕವು (ಬಿಎಫ್‌ಐಯು) ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಇದಕ್ಕೆ ಸಂಬಂಧಪಟ್ಟ ನಿರ್ದೇಶನಗಳನ್ನು ಗುರುವಾರ ಕಳುಹಿಸಿದ್ದು, ಈ ಖಾತೆಗಳಲ್ಲಿನ ಎಲ್ಲಾ ರೀತಿಯ ವಹಿವಾಟುಗಳನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಿದೆ' ಎಂದು ಪ್ರಥಮ್ ಅಲೊ ಪತ್ರಿಕೆ ವರದಿ ಮಾಡಿದೆ.
ಈ 17 ವ್ಯಕ್ತಿಗಳಿಗೆ ಸೇರಿದ ಖಾತೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಅವರು ನಡೆಸಿರುವ ಎಲ್ಲ ರೀತಿಯ ಹಣಕಾಸು ವ್ಯವಹಾರಗಳ ವಿವರಗಳನ್ನು ಮೂರು ದಿನಗಳ ಒಳಗಾಗಿ ಕಳುಹಿಸಿಕೊಂಡುವಂತೆ ಬಿಎಫ್‌ಐಯು, ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳನ್ನು ಕೇಳಿದೆ.
ಬಾಂಗ್ಲಾದೇಶದ 'ಸಮ್ಮಿಲಿತ್ ಸನಾತನಿ ಜಾಗರಣ ಜೋತೆ' ಹಿಂದೂ ಸಂಘಟನೆಯ ವಕ್ತಾರ ಚಿನ್ಮಯಿ ಕೃಷ್ಣದಾಸ್ ಅವರನ್ನು ದೇಶದ್ರೋಹದ ಆರೋಪದಲ್ಲಿ ಸೋಮವಾರ ಢಾಕಾದ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಮಂಗಳವಾರ ಇವರ ಜಾಮೀನು ಅರ್ಜಿಯನ್ನು ಚಟ್ಟೋಗ್ರಾಮ ನ್ಯಾಯಾಲಯವು ತಿರಸ್ಕರಿಸಿ, ಜೈಲಿಗೆ ಕಳುಹಿಸಿತ್ತು.
ಚಿನ್ಮಯಿ ಕೃಷ್ಣದಾಸ್ ಅವರ ಬಂಧನದ ವೇಳೆ ನಡೆದ ಘರ್ಷಣೆಯಲ್ಲಿ ವಕೀಲ ಸೈಫುಲ್ ಇಸ್ಲಾಂ ಎಂಬವರು ಮೃತಪಟ್ಟಿದ್ದರು. ಕೃಷ್ಣದಾಸ್ ಅವರು ಈ ಹಿಂದೆ ಬಾಂಗ್ಲಾದೇಶದ ಇಸ್ಕಾನ್‌ನ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು.