ಮುಳ್ಳೇರಿಯ: ಸನ್ಯಾಸಿ ಶ್ರೇಷ್ಠರಲ್ಲಿ ಪ್ರಮುಖರಾದ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ವಾಹನದ ಮೇಲೆ ದಾಳಿ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ಆಗ್ರಹಿಸಿದ್ದಾರೆ.
ಅವರು ಎಡನೀರುಶ್ರೀಗಳು ಸಂಚರಿಸುತ್ತಿದ್ದ ವಾಹನದ ಮೇಲೆ ಬೋವಿಕ್ಕಾನದ ಬಾವಿಕೆರೆಯಲ್ಲಿ ಸೋಮವಾರ ನಡೆದ ದಾಳಿ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಮಂಗಳವಾರ ಬೋವಿಕ್ಕಾನ ಪೇಟೆಯಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು.
ಸೈಕಲ್ ರ್ಯಾಲಿಯ ಮರೆಯಲ್ಲಿ, ಕೆಲವು ಕಿಡಿಗೇಡಿಗಳಿಂದ ಶಾಂತಿಕದಡುವ ಯತ್ನ ನಡೆದಿದ್ದರೂ, ಆರೋಪಿಗಳನ್ನು ಬಂಧಿಸದ ಪೊಲೀಸರ ನಿಷ್ಕ್ರಿಯ ಧೋರಣೆ ಭವಿಷ್ಯದಲ್ಲಿ ಮಾರಕವಾಗಿ ಪರಿಣಮಿಸಲಿದೆ. ಶಂಕರಾಚಾರ್ಯ ಪರಂಪರೆಯ ಎಡನೀರು ಮಠದ ಪರಮಪೂಜ್ಯ ಸ್ವಾಮೀಜಿ ಸಂಚರಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದರೂ, ಆರೋಪಿಗಳನ್ನು ಬಂಧಿಸದಿರುವ ಕೃತ್ಯ ಖಂಡನೀಯ. ಎಲ್ಲ ಸಮುದಾಯವನ್ನೂ ಸಮಾನವಾಗಿ ಕಾಣುವ ಎಡನೀರು ಮಠದ ಸ್ವಾಮೀಜಿ ಅವರಿಗೆ ಉಂಟಾಗಿರುವ ಇಂತಹ ಪರಿಸ್ಥಿತಿ ಇಡೀ ಸಮುದಾಯಕ್ಕೆ ನೋವು ತಂದುಕೊಟ್ಟಿದೆ. ಸ್ವಾಮೀಜಿ ಮೇಲೆ ಆಕ್ರಮಣ ನಡೆಸಿದ ಆರೋಪಿಗಳನ್ನು ಬಂಧಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಹಿಮದೂ ಐಕ್ಯವೇದಿ ಜಿಲ್ಲಾ ಸಮಿತಿ ಅಧ್ಯಕ್ಷ ಎಸ್.ಪಿ ಶಾಜಿಸಮಾರಂಭ ಉದ್ಘಾಟಿಸಿದರು.
ವಿಹಿಂಪ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ, ಆರೆಸ್ಸೆಸ್ ಜಿಲ್ಲಾ ಸಂಘಚಾಲಕ್ ಪ್ರಭಾಕರ ಮಾಸ್ಟರ್, ಜಿಲ್ಲಾ ಕಾರ್ಯವಾಹ್ ಗೌತಮ್, ವಾಸುದೇವ ತಂತ್ರಿ ಕುಂಟಾರು, ಅರುಣ್ ಕುಮಾರ್ ಪುತ್ತಿಲ, ಸಂಕಪ್ಪ ಭಂಡಾರಿ, ಡಾ. ಜಯಪ್ರಕಾಶ್‍ನಾರಾಯಣ್ ತೊಟ್ಟೆತ್ತೋಡಿ, ವಾಮನ ಆಚಾರ್ಯ, ಸೀತಾರಾಮ ಬಳ್ಳುಳ್ಳಾಯ, ವಿವಿಧ ಸಮುದಾಯ ಸಂಘಟನೆಗಳ ಪ್ರಮುಖರು, ಮಹಿಳೆಯರು ಪಾಲ್ಗೊಮಡಿದ್ದರು. ಕಾರ್ಯಕ್ರಮಕ್ಕೆ ಮೊದಲು ಬೋವಿಕ್ಕಾನ ಪೇಟೆಯಲ್ಲಿ ನಾಮಜಪದೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ರಾಜನ್ ಮುಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.