ಕೋಯಿಕೋಡ್: ಕೊಡಕರ ಕಪ್ಪುಹಣ ಪ್ರಕರಣದಲ್ಲಿ ಸಿಪಿಐ (ಎಂ) ಮತ್ತು ಬಿಜೆಪಿ ನಡುವೆ ಅಪವಿತ್ರ ನಂಟು ಇದೆ ಎಂದು ಆರೋಪಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್, 'ಈ ವಿಷಯದ ಬಗ್ಗೆ ಸಮಗ್ರ ತನಿಖೆ ಆಗಬೇಕು' ಎಂದು ಆಗ್ರಹಿಸಿದೆ.
ಸಿಪಿಐ(ಎಂ) ಮತ್ತು ಬಿಜೆಪಿ ನಡುವಿನ ಅಪವಿತ್ರ ಮೈತ್ರಿಯಿಂದಾಗಿ ಪ್ರಕರಣದ ತನಿಖೆಗೆ ಹಿನ್ನಡೆಯಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ದೂರಿದ್ದಾರೆ.
2021ರ ಕೊಡಕರ ಕಪ್ಪುಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ತ್ರಿಶ್ಶೂರ್ ಜಿಲ್ಲಾ ಕಚೇರಿಯ ಮಾಜಿ ಕಾರ್ಯದರ್ಶಿ ತಿರೂರ್ ಸತೀಶ್ ಅವರು, ಅದು ಪಕ್ಷದ ಚುನಾವಣಾ ನಿಧಿಯ ಭಾಗವಾಗಿತ್ತು ಎಂದು ಆರೋಪಿಸಿರುವುದು, ರಾಜ್ಯ ರಾಜಕೀಯದಲ್ಲಿ ಭಾರಿ ಗದ್ದಲ ಸೃಷ್ಟಿಸಿದೆ.
'ಚುನಾವಣಾ ಸಾಮಗ್ರಿಗಳ ನೆಪದಲ್ಲಿ ಧರ್ಮರಾಜನ್ ಎಂಬುವರು ಆರು ಗೋಣಿಚೀಲಗಳಲ್ಲಿ ಹಣವನ್ನು ಪಕ್ಷದ ಕಚೇರಿಗೆ ತಂದು ಕಾವಲು ಕಾಯುತ್ತಿದ್ದರು ಎಂದು ಸತೀಶ್ ಆರೋಪಿಸಿದ್ದರು' ಎಂಬುದಾಗಿ ಸತೀಶನ್ ತಿಳಿಸಿದ್ದಾರೆ.
'ಕೇರಳ ಪೊಲೀಸರಿಗೆ ಈ ಹಣದ ಮೂಲ ಮತ್ತು ಸ್ಥಳಗಳ ಬಗ್ಗೆ ತಿಳಿದಿದೆ. ಆದರೆ ಅವರು ಮಾಹಿತಿ ಬಹಿರಂಗಪಡಿಸುತ್ತಿಲ್ಲ' ಎಂದ ಸತೀಶನ್, 'ಈ ಪ್ರಕರಣ ಬಿಜೆಪಿಗೆ ಸಂಬಂಧಿಸಿದ್ದರಿಂದ ಅಲ್ಪ ಪ್ರಮಾಣದ ಪ್ರಗತಿ ಕಂಡಿದೆಯಷ್ಟೇ' ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಇತ್ತೀಚೆಗೆ ಮಾಹಿತಿ ಬಹಿರಂಗಪಡಿಸಿದ ಬಿಜೆಪಿಯ ಜಿಲ್ಲಾ ಕಚೇರಿಯ ಮಾಜಿ ಕಾರ್ಯದರ್ಶಿಯನ್ನೂ ಹೊಣೆಗಾರರನ್ನಾಗಿಸಬೇಕು ಎಂದು ಅವರು ಪ್ರತಿಪಾದನೆ ಮಾಡಿದರು.
'ತಿರೂರ್ ಸತೀಶ್ ಅವರ ಪ್ರಕಾರ, ಆ ಹಣ ಕಚೇರಿಯಲ್ಲಿಡಲಾಗಿತ್ತು. ಈಗ ಈ ಹಣಕ್ಕೆ ಸಂಬಂಧಿಸಿದಂತೆ ಚರ್ಚೆಯಾಗಬೇಕಿದೆ. ಅಲ್ಲದೆ ಇತರ ಜಿಲ್ಲೆಗಳಿಗೆ ಎಷ್ಟು ಹಣವನ್ನು ರವಾನಿಸಲಾಗಿದೆ ಎಂಬುದು ತನಿಖೆಯಾಗಬೇಕು' ಎಂದು ಸತೀಶನ್ ಆಗ್ರಹಿಸಿದರು.
ಇದೇ ಅಲ್ಲದೆ ಮಂಜೇಶ್ವರಂ ಲಂಚ ಪ್ರಕರಣದಲ್ಲೂ ಸಿಪಿಐ (ಎಂ) ಮತ್ತು ಬಿಜೆಪಿ ಶಾಮೀಲಾಗಿವೆ ಎಂದು ಅವರು ಆರೋಪಿಸಿದರು. ಅಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಅವರು 2021ರ ಚುನಾವಣೆಯಲ್ಲಿ ನಾಮಪತ್ರ ಹಿಂಪಡೆಯಲು ಇನ್ನೊಬ್ಬ ಅಭ್ಯರ್ಥಿ ಕೆ. ಸುಂದರ್ ಅವರಿಗೆ ಲಂಚ ನೀಡಿದ್ದಾರೆ ಎಂದು ಅವರು ದೂರಿದರು.