ಪಣಜಿ: ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆಯು ಗುರುವಾರ ಗೋವಾದ ವಾಯುವ್ಯಕ್ಕೆ ಸುಮಾರು 70 ನಾಟಿಕಲ್ ಮೈಲಿ ದೂರದಲ್ಲಿ 13 ಸಿಬ್ಬಂದಿಯನ್ನು ಹೊತ್ತಿದ್ದ ಮೀನುಗಾರಿಕಾ ಹಡಗು ಮಾರ್ಥೋಮಾಗೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ 11 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಭಾರತೀಯ ನೌಕಾಪಡೆಯು ಶುಕ್ರವಾರ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಕೋಸ್ಟ್ ಗಾರ್ಡ್ ಸೇರಿದಂತೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದೆ.
ರಕ್ಷಣಾ ಸಚಿವಾಲಯದ(MoD) ಹೇಳಿಕೆಯ ಪ್ರಕಾರ, "ನವೆಂಬರ್ 21, 2024 ರಂದು ಗೋವಾದ ವಾಯುವ್ಯಕ್ಕೆ 70 ನಾಟಿಕಲ್ ಮೈಲಿ ದೂರದಲ್ಲಿ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ PM 21, ಮೀನುಗಾರಿಕಾ ಹಡಗು ಮಾರ್ಥೋಮಾಗೆ ಡಿಕ್ಕಿ ಹೊಡೆದಿದೆ. ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ"` ಎಂದು ತಿಳಿಸಿದೆ.
ಸಬ್ಮರಿನ್ ಪಶ್ಚಿಮ ಕರಾವಳಿಯಲ್ಲಿ ಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ. ಘರ್ಷಣೆಯ ನಂತರ, ಭಾರತೀಯ ನೌಕಾಪಡೆಯು ಹುಡುಕಾಟ ಮತ್ತು ರಕ್ಷಣಾ(SAR) ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರಕ್ಷಣಾ ಕಾರ್ಯಗಳಿಗೆ ಸಹಾಯ ಮಾಡಲು ಆರಂಭದಲ್ಲಿ ಆರು ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಲಾಗಿತ್ತು.
ಈ ಅಪಘಾತಕ್ಕೆ ಕಾರಣ ಏನೂ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಆದರೆ ಅಪಘಾತ್ಕೀಡಾದ ಹಡಗಿನ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ.