ಅಹಮದಾಬಾದ್: ಆಸ್ಟ್ರೇಲಿಯಾದ ಖೋಟಾ ಡಾಲರ್‌ಗಳನ್ನು ಮುದ್ರಣ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಗುಜರಾತ್ ಪೊಲೀಸರು, ಭಾರತ ಮೂಲದ ಆಸ್ಟ್ರೇಲಿಯಾ ಪ್ರಜೆ ಸೇರಿ ನಾಲ್ವರನ್ನು ಗುರುವಾರ ಬಂಧಿಸಿದ್ದಾರೆ.
ಆಸ್ಟ್ರೇಲಿಯಾ ಪ್ರಜೆ ಮೌಲಿಕ್ ಶಂಕರಭಾಯಿ ಪಟೇಲ್, ರಾಜ್ಯದವರಾದ ರೋನಕ್ ಚೇತನ್‌ಭಾಯಿ ರಾಠೋಡ್, ಖುಷ್ ಅಶೋಕಭಾಯಿ ಪಟೇಲ್ ಹಾಗೂ ಧ್ರುವ ಹಿಮಾಂಶು ದೇಸಾಯಿ ಬಂಧಿತರು.
ಬಂಧಿತರಿಂದ 151 ಖೋಟಾ ಡಾಲರ್, ಖೋಟಾ ಡಾಲರ್‌ಗಳ 18 ಶೀಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಕೇಶ್ ವಘೇಲಾ ಎಂಬುವವರು ನೀಡಿದ ಮಾಹಿತಿ ಮೇರೆಗೆ, ಅಹಮದಾಬಾದ್ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ತಂಡ(ಎಸ್‌ಒಜಿ) ಈ ಕಾರ್ಯಾಚರಣೆ ನಡೆಸಿದೆ.
ಗಾಂಧಿನಗರದ ಪ್ರಮುಖ್ ಬಂಗಲೆ ನಿವಾಸಿ, 36 ವರ್ಷದ ಮೌಲಿಕ್ ಪಟೇಲ್ ಈ ಜಾಲದ ಸೂತ್ರಧಾರಿ ಎಂದು ಪೊಲೀಸರು ತಿಳಿಸಿದ್ದಾರೆ.
'ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಕಾರಣ ಅಕ್ಟೋಬರ್‌ನಲ್ಲಿ ಗುಜರಾತ್‌ಗೆ ಮರಳಿದ್ದ ಮೌಲಿಕ್, ಸಾರಿಗೆ ಉದ್ಯಮ ನಡೆಸುತ್ತಿದ್ದ. ತ್ವರಿತವಾಗಿ ಹಣ ಗಳಿಸಬೇಕು ಎಂಬ ಉದ್ದೇಶದಿಂದ ಖೋಟಾ ಡಾಲರ್ ಮುದ್ರಣಕ್ಕೆ ಸಂಚು ರೂಪಿಸಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ' ಎಂದು ತಿಳಿಸಿದ್ದಾರೆ.