ಕರೀಂಗಂಜ್: ಅಸ್ಸಾಂ ಸರ್ಕಾರ ಗುರುವಾರ ಕರೀಂಗಂಜ್ ಜಿಲ್ಲೆಯ ಹೆಸರು ಬದಲಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದು, ಬರಾಕ್ ಕಣಿವೆಯಲ್ಲಿರುವ ಜಿಲ್ಲೆಯನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಲಾಗಿದೆ.
ಜಿಲ್ಲಾ ಕೇಂದ್ರ ಕರೀಂಗಂಜ್ ಪಟ್ಟಣವನ್ನು ಶ್ರೀಭೂಮಿ ಪಟ್ಟಣ ಎಂದು ಮರುನಾಮಕರಣ ಮಾಡಲಾಗಿದೆ.
ಅಸ್ಸಾಂ ರಾಜ್ಯಪಾಲರ ಆದೇಶದಂತೆ ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ ಜಿಲ್ಲೆ ಮತ್ತು ಕರೀಂಗಂಜ್ ಪಟ್ಟಣವನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಿ ಸಾಮಾನ್ಯ ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಖೇಶ್ ಚಂದ್ರ ಸಾಹು ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಬದಲಾವಣೆಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಅವರು ತಿಳಿಸಿದ್ದಾರೆ.
ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಲು ಅಸ್ಸಾಂ ಕ್ಯಾಬಿನೆಟ್ ಮಂಗಳವಾರ ಒಪ್ಪಿಗೆ ನೀಡಿತ್ತು.
"100 ವರ್ಷಗಳ ಹಿಂದೆ, ಕಬಿಗುರು ರವೀಂದ್ರನಾಥ ಠಾಗೋರ್ ಅವರು ಅಸ್ಸಾಂನ ಆಧುನಿಕ ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ - ಮಾ ಲಕ್ಷ್ಮಿಯ ನಾಡು ಎಂದು ಬಣ್ಣಿಸಿದ್ದರು. ಇಂದು, ಅಸ್ಸಾಂ ಕ್ಯಾಬಿನೆಟ್ ನಮ್ಮ ಜನರ ಈ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ" ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಂಪುಟ ಸಭೆಯ ನಂತರ ಹೇಳಿದ್ದರು.