ಕಾಸರಗೋಡು: ಜಿಲ್ಲಾಧಿಕಾರಿಗಳ ಮುಖಾಮುಖಿ ಕಾರ್ಯಕ್ರಮ'ನಮ್ಮ ಕಾಸರಗೋಡು'ಯೋಜನೆಯನ್ವಯ ದೈವ ನರ್ತಕ ಕಲಾವಿದರೊಂದಿಗೆ ಸಂವಾದ ಆಯೋಜಿಸಲಾಯಿತು. ಸಮುದಾಯದಲ್ಲಿ ದೈವನರ್ತನ ಕಲಾವಿದರು ಮತ್ತು ಅವರ ಕುಟುಂಬ ಎದುರಿಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆ ಬಗ್ಗೆ ಜಿಲ್ಲದಿಕಾರಿ ಮುಂದೆ ಪ್ರಸ್ತುತಪಡಿಸಲಾಯಿತು.
ದೈವನರ್ತಕರು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವ ದೈವಕಲಾರೂಪವನ್ನು ಇತರ ಕಲಾ ಪ್ರಕಾರಗಳಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ನಡೆಸುತ್ತಿರುವುದು ಖಂಡನೀಯ. ಇದು ದೈವ ಭಕ್ತರಿಗೆ ಹಾಗೂ ದೈವನರ್ತನ ಕಲಾವಿದರಿಗೆ ಎಸಗುವ ಅಪಚಾರವಾಗಿದೆ ಎಂದು ದೈವನರ್ತನ ಕಲಾವಿದರು ಮನವರಿಕೆ ಮಾಡಿದರು. ದೈವಾರಾಧನೆಗೆ ಸಹಾಯವಾಗುವ ರೀತಿಯಲ್ಲಿ ಚೆಂಡೆ ಮತ್ತು ಇತರ ಆಭರಣಗಳ ಖರೀದಿಗೆ ಆರ್ಥಿಕ ನೆರವು ನೀಡಲಾಗುತ್ತಿದ್ದರೂ, ಈ ಕಲಾವಿದರಿಗೆ ಇತರ ಯವುದೇ ಸವಲತ್ತು ಲಭ್ಯವಾಗುತ್ತಿಲ್ಲ. ಹೊಸ ತಲೆಮಾರಿನವರು ದೈವನರ್ತನ ಎಂಬ ಧಾರ್ಮಿಕ ಕಲೆಯ ಆರಾಧನೆಗೆ ಮುಂದಾಗುತ್ತಿಲ್ಲ. ಸರ್ಕಾರ ಹೊಸ ಪೀಳಿಗೆಗೆ ಸಹಾಯ ನೀಡಿ, ದೈವನರ್ತನ ಕಲಾರಾಧನೆಯನ್ನು ಪ್ರೋತ್ಸಾಹಿಸುವ ಮೂಲಕ ಅದನ್ನು ಆಚರಣೆಯ ಭಾಗವಾಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಖಾರಿಯನ್ನು ಆಗ್ರಹಿಸಲಾಯಿತು.
ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಭರವಸೆ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್ ಉಪಸ್ಥಿತರಿದ್ದರು.