ಕುಂಬಳೆ: ಕುಂಬಳೆಯಲ್ಲಿ ಕೋತಿ ದಾಳಿಯಿಂದ ಮದ್ರಸಾ ಶಿಕ್ಷಕ ಹಾಗೂ ಸೈಕಲ್ ಸವಾರ ವಿದ್ಯಾರ್ಥಿ ಗಾಯಗೊಂಡಿದ್ದಾರೆ. ಕುಂಬಳೆ ಸಿಎಚ್‍ಸಿ ರಸ್ತೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಮದ್ರಸಾ ಶಿಕ್ಷಕ ಪವಾಸ್ ದಾರಿಮಿ ಹಾಗೂ ಇದೇ ಹಾದಿಯಾಗಿ ಸೈಕಲ್ ಸವಾರ ವಿದ್ಯಾರ್ಥಿ ಮೇಲೂ ಕೋತಿ ದಾಳಿ ನಡೆಸಿದೆ.
ಮದ್ರಸಾ ಎದುರಿನ ಗೇಟ್ ಮುಚ್ಚಲು ತೆರಳಿದ್ದ ಸಂದರ್ಭ ಮರದಲ್ಲಿದ್ದ ಕೋತಿ ಏಕಾಏಕಿ ಪವಾಸ್ ದಾರಿಮಿ ತಲೆಮೇಲೆ ಜಿಗಿದು ಪರಚಿ ಗಾಯಗೊಳಿಸಿದೆ. ಇದೇ ರಸ್ತೆಯಲ್ಲಿ ಸೈಕಲಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿ ಮೇಲೆ ಜಿಗಿದ ಪರಿಣಾಮ ವಿದ್ಯಾರ್ಥಿ ಸೈಕಲಿಂದ ಬಿದ್ದು ಗಾಯಗೊಂಡಿದ್ದಾನೆ. ವರ್ಷದಿಂದೀಚೆಗೆ ಕುಂಬಳೆ ಆಸುಪಾಸು ಕೋತಿಗಳ ಉಪಟಳ ಹೆಚ್ಚಾಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಕೋತಿ ಸೆರೆಹಿಡಿಯಲು ಗ್ರಾಮ ಪಂಚಾಯಿತಿ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿ ವಾನರ ಪಡೆ ಸೆರೆಹಿಡಿಯಲು ಯತ್ನಿಸಿದ್ದರೂ, ಪ್ರಯೋಜನವಾಗಿರಲಿಲ್ಲ.
ಕೋತಿ ಎಸೆದ ತೆಂಗಿನಕಾಯಿ-ಮಹಿಳೆ ಕೈಮೂಳೆ ಮುರಿತ!
ಮುಳಿಯಾರು ಪಂಚಾಯಿತಿಯ ಬಾವಿಕ್ಕರ ಕೊಳತ್ತಿಂಗಾಲ್ ಎಂಬಲ್ಲಿ ತೆಂಗಿನಮರವೇರಿದ್ದ ಕೋತಿಯೊಂದು ತೆಂಗಿನ ಕಾಯಿ ಎಸೆದ ಪರಿಣಾಮ ಮಹಿಳೆ ಕೈಮೂಳೆ ಮುರಿದ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಕೃಷ್ಣನ್ ನಾಯರ್ ಎಂಬವರ ಪತ್ನಿ ಸಾವಿತ್ರಿ ಎಂಬವರ ಕೈಮೂಳೆ ಮುರಿದಿದೆ. ಸಾವಿತ್ರಿ ತಮ್ಮ ಮನೆ ಎದುರಿನ ನೀರಿನ ಟ್ಯಾಪಲ್ಲಿ ಪಾತ್ರೆ ತೊಳೆಯಲು ಹೊರಬಂದಾಗ ಮರದಲ್ಲಿದ್ದ ಕೋತಿಯೊಂದು ತೆಂಗಿನಕಾಯಿಯನ್ನು ಬಲವಾಗಿ ಎಸೆದಿದ್ದು, ಇದು ಸಾವಿತ್ರಿ ಅವರ ಕೈಗೆ ಬಿದ್ದು, ಮೂಳೆ ಮುರಿತಕ್ಕೆ ಕಾರಣವಾಗಿದೆ. ಸಾವಿತ್ರಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಪ್ರದೇಶದಲ್ಲಿ ವ್ಯಾಪಕವಾಗಿ ಕೃಷಿನಾಶ ನಡೆಸುತ್ತಿರುವ ವಾನರ ಗುಂಪು, ಇದೀಗ ಮಾನವ ಜೀವಕ್ಕೂ ಅಪಾಯ ತಂದೊಡ್ಡಲಾರಂಭಿಸಿದೆ.