ಲಾಹೋರ್: ಸ್ವಾತಂತ್ರ್ಯ ಹೋರಾಟಗಾರ ಶಾಹೀದ್ ಭಗತ್ ಸಿಂಗ್ ಅವರನ್ನು ಪಾಕಿಸ್ತಾನ ಉಗ್ರಗಾಮಿ ಎಂದು ಅಪಮಾನ ಮಾಡಿರುವ ಘಟನೆ ವರದಿಯಾಗಿದ್ದು, ಪಾಕಿಸ್ತಾನದ ವಿರುದ್ಧ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಶಾಹೀದ್ ಭಗತ್ ಸಿಂಗ್ ಅವರ ಗೌರವಾರ್ಥವಾಗಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಶಾದ್ಮನ್ ಚೌಕ್ ಗೆ ಅವರ ಹೆಸರನ್ನು ಮರುನಾಮಕರಣ ಮಾಡುವ ಯೋಜನೆಯನ್ನು ಪಾಕಿಸ್ತಾನ ರದ್ದುಪಡಿಸಿದ್ದು ಮಾತ್ರವಲ್ಲದೇ ಅವರನ್ನು ಉಗ್ರಗಾಮಿ ಎಂದು ಕರೆದಿದೆ.
ಪಾಕಿಸ್ತಾನದ ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರು ನೀಡಿದ ವರದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರನ್ನು 'ಭಯೋತ್ಪಾದಕ' ಎಂದು ಹಣೆಪಟ್ಟಿ ನೀಡಿದ ಬಳಿಕ ಲಾಹೋರ್‌ನಲ್ಲಿರುವ ಶಾದ್ಮನ್ ಚೌಕ್ ಗೆ ಅವರ ಹೆಸರನ್ನು ಮರುನಾಮಕರಣ ಮಾಡುವ ಯೋಜನೆಯನ್ನು ರದ್ದು ಪಡಿಸಲಾಗಿತ್ತು. ಇದೀಗ ಪಾಕಿಸ್ತಾನದ ಈ ನಡೆಯನ್ನು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ.
ಪಾಕಿಸ್ತಾನದಲ್ಲಿ ಭಗತ್ ಸಿಂಗ್ ರನ್ನು ಗೌರವಿಸುವುದು ಹಾಗಿರಲಿ.. ಆದರೆ ಅವರಿಗೆ ಅಪಮಾನ ಮಾಡುವುದು ಸರಿಯಲ್ಲ. ಈ ವಿಚಾರದಲ್ಲಿ ಕೂಡಲೇ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕು. ಅಲ್ಲದೆ ಪಾಕಿಸ್ತಾನದಿಂದ ವರದಿ ತರಿಸಿಕೊಳ್ಳಿ ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ. ಅಲ್ಲದೆ ಭವಿಷ್ಯದಲ್ಲಿ ಭಗತ್ ಸಿಂಗ್ ಅವರ ಬಗ್ಗೆ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ತಡೆಯಲು ಈ ಟೀಕೆಗಳನ್ನು ದಾಖಲೆಗಳಿಂದ ತೆಗೆದುಹಾಕುವಂತೆ ಲಾಹೋರ್ ಹೈಕೋರ್ಟ್‌ಗೆ ಮನವಿ ಮಾಡಿದೆ.
ಏತನ್ಮಧ್ಯೆ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಕೂಡ ಪಾಕಿಸ್ತಾನದ ಈ ಕ್ರಮವನ್ನು ಖಂಡಿಸಿದ್ದು, 'ಅವಿಭಜಿತ ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ವೀರನನ್ನು ನಿಂದಿಸಲು ಭಯೋತ್ಪಾದಕರಿಗೆ ಆಶ್ರಯ ನೀಡುವುದಕ್ಕೆ ಹೆಸರುವಾಸಿಯಾದ ರಾಷ್ಟ್ರವು ಮುಂದಾಗಿದೆ. ಇದು ಕೇವಲ ಅದರ "ಬೂಟಾಟಿಕೆ" ಎಂದು ಕರೆದಿದೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್ ಸಿಂಗ್ ಅವರಂತಹ ವ್ಯಕ್ತಿಗಳನ್ನು ಗುರುತಿಸುವಲ್ಲಿ ಪಾಕಿಸ್ತಾನದ ದ್ವಂದ್ವ ನೀತಿಯ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಏಕಕಾಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾರೆ. ನಿಜವಾದ ಹೀರೋಗೆ ಅಗೌರವ ತೋರಿದ ಪಾಕಿಸ್ತಾನಕ್ಕೆ ನಾಚಿಕೆಯಾಗಬೇಕು ಎಂದು ಪಂಜಾಬ್ ಬಿಜೆಪಿ ವಕ್ತಾರ ಪ್ರೀತ್ಪಾಲ್ ಸಿಂಗ್ ಬಲಿವಾಲ್ ಹೇಳಿದ್ದಾರೆ.