ಕಾಸರಗೋಡು: 2024 ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕಾಸರಗೋಡಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಹರಿಕಾರ ಕೆ.ಕೆ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಮಾಜ ಸೇವಾ ವಿಭಾಗದಲ್ಲಿ ಕೆ. ಕೆ. ಶೆಟ್ಟಿ ಅವರ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನ.1ರಂದು ನಡೆಯಲಿರುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನದಂದು ಜಿಲ್ಲಾಡಳಿತವು ಪ್ರಶಸ್ತಿ ನೀಡಿ ಗೌರವಿಸಲಿದೆ.
ಕೆ. ಕೆ. ಶೆಟ್ಟಿ ಎಮದೇ ಪರಿಚಿತರಾಗಿರುವ ಕುತ್ತಿಕಾರು ಕಿಞಣ್ಣ ಶೆಟ್ಟಿ ಕಾಸರಗೋಡು ಮತ್ತು ದ.ಕ ಜಿಲ್ಲೆಯಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. 2020ರಲ್ಲಿ ಶ್ರೀ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಸಂಪೂರ್ಣ ಪುನ: ನಿರ್ಮಾಣದ ಮತ್ತು ಬ್ರಹ್ಮಕಲಶವನ್ನು ತಮ್ಮ ನೇತೃತ್ವದಲ್ಲಿ ಪೂರ್ತಿಗೊಳಿಸಿ ಊರಿಗೆ ಸಮರ್ಪಿಸಿದ್ದರು. ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಶಬರಿಮಲೆ ಅಯ್ಯಪ್ಪನ್ ದೇವಸ್ಥಾನದ ನಿರ್ಮಾಣ ಮತ್ತು ಸಂಪೂರ್ಣ ಜವಾಬ್ದಾರಿಯನ್ನೂ ನಿಭಾಯಿಸಿದ್ದರು. ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇರಿದಂತೆ ಹತ್ತು ಹಲವು ದೇವಾಲಯಗಳ ನವೀಕರಣ ಮತ್ತು ಜೀರ್ಣೋದ್ದಾರದಲ್ಲಿ ಇವರು ಮಹತ್ತರವಾದ ಪಾತ್ರವಹಿಸಿದ್ದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಶಕ್ತರಿಗೆ ನೆರವು, ಕಲಿಕಾ ಸಹಾಯ, ವಿವಾಹ ಸಹಾಯ ನೀಡುವ ಮೂಲಕ ಸಮಾಜಸೇವೆಯಲ್ಲಿ ತಮ್ಮನ್ನು ಸದ್ದಿಲ್ಲದೆ ತೊಡಗಿಸಿಕೊಂಡು ಬರುತ್ತಿದ್ದಾರೆ.