ಬಾಕು: ಭೂಗೋಳದ ದಕ್ಷಿಣದ ದೇಶಗಳಿಗಾಗಿ ವಿಶ್ವಸಂಸ್ಥೆಯ ಹವಾಮಾನ ಸಮಾವೇಶವು ಘೋಷಿಸಿರುವ ವಾರ್ಷಿಕ ಅಂದಾಜು ₹25 ಸಾವಿರ ಕೋಟಿ (300 ಶತಕೋಟಿ ಡಾಲರ್) ಮೊತ್ತದ 'ಹವಾಮಾನ ಹಣಕಾಸು ಪ್ಯಾಕೇಜ್' ಅನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ.
'ಬಡ ದೇಶಗಳಿಗೆ ಅತ್ಯಲ್ಪ ಮೊತ್ತದ ಪ್ಯಾಕೇಜ್ ನೀಡಲಾಗಿದೆ.
ಈ ಕುರಿತು ಆಕ್ಷೇಪ ವ್ಯಕ್ತಪಡಿಸಲು ಅವಕಾಶ ನೀಡದಯೇ, ಹವಾಮಾನ ಸಮಾವೇಶದ (ಸಿಒಪಿ29) ಅಧ್ಯಕ್ಷ ವಹಿಸಿರುವ ರಾಷ್ಟ್ರ ಹಾಗೂ ವಿಶ್ವಸಂಸ್ಥೆ ಈ ಪ್ಯಾಕೇಜ್ ಘೋಷಿಸಿವೆ' ಎಂದು ಭಾರತ ಹೇಳಿದೆ.
ಹವಾಮಾನ ಸಮಾವೇಶದ ಅಂಗವಾಗಿ ನಡೆದ ಸರ್ವಸಾಧಾರಣ ಸಭೆಯಲ್ಲಿ, ಭಾರತದ ಆರ್ಥಿಕ ವ್ಯವಹಾರಗಳ ಇಲಾಖೆ ಸಲಹೆಗಾರ್ತಿ ಚಾಂದಿನಿ ರೈನಾ ಅವರು ಈ ಮಾತು ಹೇಳಿದ್ದಾರೆ.
'ಈ ಪ್ಯಾಕೇಜ್ ಅನ್ಯಾಯದಿಂದ ಕೂಡಿದೆ ಹಾಗೂ ತಮಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಪ್ಯಾಕೇಜ್ ಅಂಗೀಕರಿಸುವುದಕ್ಕೂ ಮೊದಲು ಈ ವಿಷಯವಾಗಿ ಮಾತನಾಡಬೇಕೆಂಬ ಭಾರತದ ಮನವಿಯನ್ನು ನಿರ್ಲಕ್ಷಿಸಲಾಗಿದೆ. ಈ ಘಟನೆಯಿಂದ ತೀವ್ರ ನಿರಾಸೆಯಾಗಿದೆ' ಎಂದು ಹೇಳಿದ್ದಾರೆ.
ಭಾರತದ ವಾದವನ್ನು ಬೆಂಬಲಿಸಿ ಮಾತನಾಡಿದ ನೈಜೀರಿಯಾ ಪ್ರತಿನಿಧಿ, '300 ಶತಕೋಟಿ ಡಾಲರ್ ಪ್ಯಾಕೇಜ್ ಘೋಷಿಸಿರುವುದು ತಮಾಷೆಯೇ ಸರಿ' ಎಂದಿದ್ದಾರೆ. ಮಲಾವಿ ಮತ್ತು ಬೊಲಿವಿಯಾ ದೇಶಗಳು ಕೂಡ ಈ ವಿಚಾರವಾಗಿ ಭಾರತವನ್ನು ಬೆಂಬಲಿಸಿವೆ.
ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳನ್ನು ಎದುರಿಸುವುದಕ್ಕಾಗಿ 1.3 ಟ್ರಿಲಿಯನ್ ಡಾಲರ್ ನೀಡಬೇಕು ಎಂಬುದು ಭೌಗೋಳಿಕವಾಗಿ ದಕ್ಷಿಣದಲ್ಲಿರುವ ರಾಷ್ಟ್ರಗಳ ಬೇಡಿಕೆಯಾಗಿದೆ.
ಚಾಂದಿನಿ ರೈನಾ ಭಾರತದ ಆರ್ಥಿಕ ವ್ಯವಹಾರಗಳ ಇಲಾಖೆ ಸಲಹೆಗಾರ್ತಿಅಭಿವೃದ್ದಿ ಹೊಂದಿರುವ ರಾಷ್ಟ್ರಗಳು ತಮ್ಮ ಜವಾಬ್ಧಾರಿ ನಿಭಾಯಿಸಲು ಆಸಕ್ತಿ ಹೊಂದಿಲ್ಲ ಎಂಬುದನ್ನು ಈ ಪ್ಯಾಕೇಜ್ ತೋರಿಸಿದೆ.