ಬೀಜಿಂಗ್: ಪೂರ್ವ ಲಡಾಖ್‌ನಲ್ಲಿ ನಾಲ್ಕು ವರ್ಷಗಳ ಸುದೀರ್ಘ ಬಿಕ್ಕಟ್ಟನ್ನು ಕೊನೆಗೊಳಿಸುವ ಸಂಬಂಧ ಮಾಡಿರುವ ಒಪ್ಪಂದದ ಜಾರಿಯಲ್ಲಿ ಚೀನಾ ಮತ್ತು ಭಾರತದ ಸೇನೆ ಉತ್ತಮ ಪ್ರಗತಿ ಸಾಧಿಸುತ್ತಿವೆ ಎಂದು ಚೀನಾದ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.
'ಚೀನಾದ ಡ್ರ್ಯಾಗನ್ ಮತ್ತು ಭಾರತದ ಆನೆ ಜತೆಯಾಗಿ ಹೆಜ್ಜೆಯಿಟ್ಟು, ಸಾಮರಸ್ಯದ ನೃತ್ಯ ಮಾಡುವುದನ್ನು ನಾವು ಎದುರು ನೋಡುತ್ತಿದ್ದೇವೆ' ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವು ಕ್ವಿಯಾನ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ಅಡ್ಮಿರಲ್ ಡಾಂಗ್ ಜುನ್ ಅವರು ಈಚೆಗೆ ಲಾವೋಸ್‌ನಲ್ಲಿ ನಡೆದ ಭದ್ರತಾ ಸಮಾವೇಶದ ಸಂದರ್ಭದಲ್ಲಿ ಸಕಾರಾತ್ಮಕ ಹಾಗೂ ರಚನಾತ್ಮಕ ಸಭೆ ನಡೆಸಿದ್ದಾರೆ ಎಂದು ತಿಳಿಸಿದರು.
ಪೂರ್ವ ಲಡಾಖ್‌ನಲ್ಲಿನ ಬಿಕ್ಕಟ್ಟು ಕೊನೆಗೊಳಿಸಲು ಉಭಯ ದೇಶಗಳು ಮಾಡಿಕೊಂಡ ಒಪ್ಪಂದದ ಅನುಷ್ಠಾನದ ಪ್ರಗತಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ಒಪ್ಪಂದವನ್ನು ಎರಡೂ ಕಡೆಯವರು ಕಾರ್ಯಗತಗೊಳಿಸುತ್ತಿದ್ದಾರೆ' ಎಂದರು.
ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ನಿಯೋಜಿಸಿರುವ ತಮ್ಮ ಸೇನೆಗಳನ್ನು ಒಪ್ಪಂದದ ಪ್ರಕಾರ ಚೀನಾ ಹಾಗೂ ಭಾರತ ವಾಪಸ್ ಕರೆಸಿಕೊಂಡಿವೆ.