ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ವಿಧಾನಸಭಾ ಕ್ಷೇತ್ರದ ಶಾಸಕ ದೇವೇಂದ್ರ ಸಿಂಗ್ ರಾಣಾ (59) ಗುರುವಾರ ನಿಧನರಾಗಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಹರಿಯಾಣದ ಫರಿದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಜಮ್ಮು ಪ್ರದೇಶದ ಡೋಗ್ರಾ ಸಮುದಾಯದ ಪ್ರಬಲ ಧ್ವನಿಯಾಗಿದ್ದ ರಾಣಾ ಅವರು, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಕಿರಿಯ ಸಹೋದರ.
ರಾಣಾ ಅವರ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರೀಂದರ್ ಕುಮಾರ್ ಚೌಧರಿ ಆಘಾತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಬಿಜೆಪಿ ಹಿರಿಯ ನಾಯಕ, ನನ್ನ ಸಹೋದ್ಯೋಗಿ ದೇವೇಂದ್ರ ಸಿಂಗ್ ರಾಣಾ ಅವರ ಹಠಾತ್ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಓಂ ಶಾಂತಿ' ಎಂದು ಬರೆದುಕೊಂಡಿದ್ದಾರೆ.
ರಾಣಾ ನಿಧಕ್ಕೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸಂತಾಪ ಸೂಚಿಸಿದ್ದಾರೆ. 'ರಾಣಾ ಅವರ ಹಠಾತ್ ನಿಧನದ ಬಗ್ಗೆ ಕೇಳಿ ಆಘಾತವಾಗಿದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಸಂತಾಪಗಳು' ಎಂದು ಹೇಳಿದ್ದಾರೆ.
'ರಾಣಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ರಾಜಕೀಯ ವ್ಯಕ್ತಿಯಾಗಿದ್ದರು. ಅವರ ಹಠಾತ್ ನಿಧನವು ಬಿಜೆಪಿ ಮತ್ತು ಅವರ ಬೆಂಬಲಿಗರಿಗೆ ಆಘಾತವನ್ನುಂಟು ಮಾಡಿದೆ' ಎಂದು ಬಿಜೆಪಿ ವಕ್ತಾರ ಸಾಜಿದ್ ಯೂಸುಫ್ ಹೇಳಿದ್ದಾರೆ.
ರಾಣಾ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.