ಶಿಮ್ಲಾ: ಮದುವೆ, ಶಿಶುಗಳ ಜನನ, ನಾಮಕರಣ ಸಂದರ್ಭಗಳಲ್ಲಿ ಮನೆಗಳಿಗೆ ಬಂದು ನೃತ್ಯ ಮಾಡುವವರಿಗೆ ವಿಶೇಷ ಧನಕ್ಕೆ (ಶಗುನ್) ನೀಡಲು ಹಿಮಾಚಲಪ್ರದೇಶದ ಹಲವು ಗ್ರಾಮಪಂಚಾಯಿತಿಗಳು ದರಪಟ್ಟಿ ಪ್ರಕಟಿಸಿವೆ.
ಹಮೀರ್ಪುರ್ ಜಿಲ್ಲೆಯ ಕೋಟ ಪಂಚಾಯತ್ ಕೂಡ ಧನ ನೀಡಲು ದರಪಟ್ಟಿಯನ್ನು ಪ್ರಕಟಿಸಿದೆ.
ಇದನ್ನು ಜಿಲ್ಲಾಧಿಕಾರಿ ಅವರಿಗೂ ನೀಡಲಾಗಿದೆ ಎಂದು ಪಂಚಾಯತ್ ಸದಸ್ಯರೊಬ್ಬರು ಹೇಳಿದ್ದಾರೆ.
ವಿವಾಹ ಸಂದರ್ಭದಲ್ಲಿ ₹3100 ಹಾಗೂ ಶಿಶುಗಳ ಜನನ, ನಾಮಕರಣ ಸಂದರ್ಭದಲ್ಲಿ ಮನೆಗಳಿಗೆ ಬರುವವರಿಗೆ ₹2100 ನಿಗದಿ ಮಾಡಲಾಗಿದೆ. ಹಾಗೇ ಗ್ರಾಮಸ್ಥರ ಅನುಮತಿ ಇಲ್ಲದೇ ಅವರು ಬರುವಂತಿಲ್ಲ ಎಂಬ ಷರತ್ ಹಾಕಲಾಗಿದೆ. ಪಂಚಾಯತ್ ಆದೇಶಗಳನ್ನು ಪಾಲಿಸದಿದ್ದರೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬಲವಂತವಾಗಿ ಹಣ ವಸೂಲಿ ಮಾಡುವುದು, ಕೇಳಿದಷ್ಟು ಹಣ ಕೊಡದಿದ್ದರೇ ಜನರಿಗೆ ಕಿರುಕುಳ ನೀಡುತ್ತಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.