ಮಂಜೇಶ್ವರ: ಗಡಿನಾಡಿನ ಭಾಷಾ ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಸವಲತ್ತುಗಳನ್ನು ಕಸಿದುಕೊಳ್ಳಲಾಗುತ್ತಿದ್ದು, ಇದರ ವಿರುದ್ಧ ಸಾಮೂಹಿಕ ಹೋರಾಟ ನಡೆಸುವುದು ಅನಿವಾರ್ಯ ಎಂಬುದಾಗಿ ಕನ್ನಡ ಅಭಿವೃದ್ಧಿ ಪರಾಧಿಕಾರ ಅದ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
(ಚಿತ್ರ ಮಾಹಿತಿ: ಕನ್ನಡಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕನ್ನಡ ಅಭಿವೃದ್ಧಿ ಪರಾಧಿಕಾರ ಅದ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು.)ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಶನಿವಾರ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಸನಿಹದ 'ಕಲಾಸ್ಪರ್ಶಂ ಸಭಾಂಗಣ'ದಲ್ಲಿ ಕೇರಳ ಮತ್ತು ಗೋವಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗಡಿನಾಡ ಕನ್ನಡಿಗರಿಗಿರುವ ಸಂವಿಧಾನಹಕ್ಕುಗಳನ್ನು ಗೌಣಗೊಳಿಸುವ ಕೆಲಸ ನಡೆಯುತ್ತಿದ್ದು, ಭಾಷೆಯ ಉಳಿವಿಗಾಗಿ ಹೆಗಲುಕೊಟ್ಟು ಕೆಲಸಮಾಡಬೇಕಾದ ಅಗತ್ಯವಿದೆ. ಭಾಷೆ, ಸಂಸ್ಕøತಿ ಉಳಿಸುವ ಹಕ್ಕನ್ನು ಒಕ್ಕೂಟ ವ್ಯವಸ್ಥೆ ಒದಗಿಸಿಕೊಟ್ಟಿದೆ. ಈ ಹಕ್ಕನ್ನು ದಮನಿಸುವ ಯತ್ನ ನಡೆಯುತ್ತಿದ್ದರೆ, ಇದು ಸಂವಿಧಾನಕ್ಕೆ ಎಸಗುವ ಅಪಚಾರವಾಗಲಿದೆ. ಇದನ್ನು ರಾಷ್ಟ್ರಪತಿಯ ಗಮನಕ್ಕೆ ತರುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಬೇಕಾಗಿದೆ. ಗಡಿನಾಡಿನಲ್ಲಿ ಭಾಷಾ ಸಮಸ್ಯೆ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಕನ್ನಡಿಗರು ಮುಂದಾಗಬೇಕು. ಇದಕ್ಕೆ ಪ್ರಾಧಿಕಾರದ ಬೆಂಬಲ ಸದಾ ಇರಲಿದೆ. ಎಲ್ಲಾ ಭಾಷೆ, ಸಂಸ್ಕøತಿಯೂ ಇಂದು ಅವನತಿಯ ಹಾದಿಯಲ್ಲಿದೆ. ಭಾಷಾ ಸಮಸ್ಯೆ ಒಂದು ಪ್ರತ್ಯೇಕ ಭಾಷೆಗೆ ಸೀಮಿತವಾಗಿಲ್ಲ. ಭಾಷೆಯ ಉಳವಿಗಾಗಿ ಎಲ್ಲ ಭಾಷಿಗರು ಪರಸ್ಪರ ಸೌಹಾರ್ದತೆಯಿಂದ ವರ್ತಿಸಬೇಕಾಗಿದೆ ಎಂದು ತಿಳಿಸಿದರು. ಭಾಷೆ ಹೆಸರಲ್ಲಿ ಜಗಳ ಸಲ್ಲದು. ಇದು ಭಾಷೆಯ ಅವನತಿಗೆ ಹಾದಿಮಾಡಿಕೊಡಬಲ್ಲುದು. ಭಾಷೆಯ ಬಗ್ಗೆ ತಪ್ಪು ಅಭಿಪ್ರಾಯ, ಕೀಳರಿಮೆ ಬಿಟ್ಟುಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಭಾಷಾಂಧತೆ ಬಿಟ್ಟು ಭಾಷೆಯ ಬೆಳವಣಿಗೆಗೆ ಒಟ್ಟಾಗಿ ಶ್ರಮಿಸೋಣ ಎಂದು ತಿಳಿಸಿದರು.
ಭಾಷಾ ನಿರ್ದೇಶಕರ ನೇಮಕವಾಗಲಿ:
ಗಡಿನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಭಾಷಾ ನಿರ್ದೇಶಕರ ನೇಮಕಾತಿ ಅಗತ್ಯವಿದೆ. ಈ ಬಗ್ಗೆ ಮುಖ್ಯ ಮಂತ್ರಿ ಜತೆ ಸಮಾಲೋಚಿಸಲಾಗುವುದು ಎಂದು ತಿಳಿಸಿದರು.
---,,,,,,,,,,,,,,,,
ಹೈಲೈಟ್ಸ್-
ಹೊರನಾಡು ಹಾಗೂ ಗಡಿನಾಡಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ವಾರ್ಷಿಕ ತಲಾ 25ಸಾವಿರ ರೂ.ನಂತೆ ವಿತರಿಸುತ್ತಿದ್ದ ವಿದ್ಯಾರ್ಥಿ ವೇತನವನ್ನು ಕರೊನಾ ನಂತರ ಸ್ಥಗಿತಗೊಳಿಸಲಾಗಿದ್ದು, ನಾಲ್ಕು ವರ್ಷಗಳಿಂದ ಈ ಮೊತ್ತ ಬಾಕಿಯಿದೆ. ನಾಲ್ಕು ವರ್ಷದ ಈ ಮೊತ್ತ ನೀಡಲು ಕನಿಷ್ಠ ಆರು ಕೋಟಿ ರೂ. ಅಗತ್ಯವಿದ್ದು, ಈ ಮೊತ್ತವನ್ನು ನೀಡುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು. ಹಣ ಬಿಡುಗಡೆಗೊಂಡಲ್ಲಿ ಕಾಸರಗೋಡು ಅಥವಾ ಮಂಜೇಶ್ವರದಲ್ಲಿ ಕಾರ್ಯಖ್ರಮ ಹಮ್ಮಿಕೊಳ್ಳುವ ಮೂಲಕ ಧನಸಹಾಯ ವಿತರಿಸಲಾಗುವುದು ಎಂದು ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ವಿಧಾನಸಭೆಯಲ್ಲಿ ಧ್ವನಿ:
ಕಾಸರಗೋಡಿನ ಕನ್ನಡಿಗರಿಗಾಗಿ ವಿಧಾನಸಭೆಯಲ್ಲಿ ಧ್ವನಿಯೆತ್ತಲು ಸದಾ ಸಿದ್ಧ ಎಂಬುದಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ತಿಳಿಸಿದ್ದಾರೆ. ಅವರು ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನಸಭೆಯಲ್ಲಿ ಪ್ರಮಾಣವಚನವನ್ನು ಕನ್ನಡದಲ್ಲೇ ಸ್ವೀಕರಿಸಿರುವುದರ ಜತೆಗೆ ಕನ್ನಡ ಭಾಷಿಗರಿಗೆ ಸಮಸ್ಯೆ ಎದುರಾದಾಗಲೆಲ್ಲ ಇದರ ವಿರುದ್ಧ ಧ್ವನಿಯೆತ್ತಿ ಸಮಸ್ಯೆ ಪರಿಹರಿಸಲು ಶ್ರಮಿಸಿದ್ದೇನೆ. ಇದನ್ನು ಮುಂದುವರಿಸಲಾಗುವುದು. ಭಾಷಾವಾರು ಪ್ರಾಂತ ವಿಂಗಡನೆಯಿಂದ ಕಾಸರಗೋಡಿಗೆ ಅನ್ಯಾಯವಾಗಿದ್ದರೂ, ಇಲ್ಲಿನ ಕನ್ನಡ ಚಟುವಟಿಕೆಗಳಿಗೆ ಧಕ್ಕೆಯುಂಟಾಗಿಲ್ಲ. ಗಡಿನಾಡಿನಲ್ಲಿ ಜನಿಸಿರುವುದಕ್ಕೆ ಹೆಮ್ಮೆಯಿದೆ. ಹೃದಯದ ಭಾಷೆಯಾಗಿ ಬೆಳೆದಿರುವ ಕನ್ನಡವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷೆ ಶಮೀನಾ ಇಕ್ಬಾಲ್, ಕಾಸರಗೋಡು ಜಿಪಂ ಸದಸ್ಯ ಗೋಲ್ಡನ್ ರಹಮಾನ್, ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಟಿ. ಗುರುರಾಜ್, ಯಾಕೂಬ್ ಖಾದರ್ ಗುಲ್ವಾಡಿ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಸಮಾಜ ಸೇವಕ ಗೋಪಾಲ ಶೆಟ್ಟಿ ಅರಿಬೈಲು, ಕರ್ನಾಟಕ ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಜೆಡ್.ಎ ಕಯ್ಯಾರ್, ಕಸಾಪ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಕನ್ನಡ ಮಾಧ್ಯಮ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ರವಿ ನಾಯ್ಕಾಪು, ಕೇರಳ ಪ್ರಾಂತ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಪಿ.ಬಿ ಶ್ರೀನಿವಾಸ ರಾವ್, ಮಂಜೇಶ್ವರ ಗೋವಿಂದ ಪೈ ಸಮಾರಕ ಕಾಲೇಜು ಪ್ರಾಂಶುಪಾಲ ಪ್ರೊ. ಮಹಮ್ಮದಾಲಿ ಪೆರ್ಲ, ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಸಉಜಾತಾ ಎಸ್ ಉಪಸ್ಥಿತರಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶ್ರುತಿ ಬೆಂಗಳೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಗೋವಾದ ಆರು ಮಂದಿ ಸೇರಿದಂತೆ ಒಟ್ಟು 149ಮಂದಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಥಮ 12ಸಾವಿರ, ದ್ವಿತೀಯ 11ಸಾವಿರ ಹಾಗೂ ತೃತೀಯ 10ಸಾವಿರ ರೂ. ಪ್ರಶಸ್ತಿ ಒಳಗೊಂಡಿತ್ತು.