ನವದೆಹಲಿ: ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಹರಿಯಾಣ ನಾಲ್ಕು ರಾಜ್ಯಗಳಿಂದ ರಾಜ್ಯಸಭೆಯಲ್ಲಿ ಖಾಲಿ ಇರುವ ಆರು ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ(ಇಸಿಐ) ಮಂಗಳವಾರ ಪ್ರಕಟಿಸಿದೆ.
ಈ ಆರು ಸ್ಥಾನಗಳಿಗೆ ಡಿಸೆಂಬರ್ 20 ರಂದು ಮತದಾನ ನಡೆಯಲಿದ್ದು, ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಆಂಧ್ರಪ್ರದೇಶ ಮೂರು ಖಾಲಿ ಸ್ಥಾನಗಳನ್ನು ಹೊಂದಿದ್ದು, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಹರಿಯಾಣದಿಂದ ತಲಾ ಒಂದು ಸ್ಥಾನ ಭರ್ತಿ ಮಾಡಬೇಕಾಗಿದೆ.
ಆಂಧ್ರಪ್ರದೇಶದಲ್ಲಿ, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ(ವೈಎಸ್‌ಆರ್‌ಸಿಪಿ) ಮೂವರು, ವೆಂಕಟರಮಣ ರಾವ್ ಮೋಪಿದೇವಿ, ಬೀಧ ಮಸ್ತಾನ್ ರಾವ್ ಯಾದವ್ ಮತ್ತು ಆರ್ ಕೃಷ್ಣಯ್ಯ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಸ್ಥಾನಗಳಿಗೆ ಈಗ ಚುನಾವಣೆ ಘೋಷಣೆಯಾಗಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ(ಟಿಡಿಪಿ) ಎಲ್ಲಾ ಮೂರು ಸ್ಥಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.
ಬಿಜು ಜನತಾ ದಳ(ಬಿಜೆಡಿ) ಸಂಸದ ಸುಜೀತ್ ಕುಮಾರ್ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಒಡಿಶಾದ ಒಂದು ಸ್ಥಾನ ತೆರವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಈ ಸ್ಥಾನವನ್ನು ಗೆಲ್ಲುವ ನಿರೀಕ್ಷೆಯಿದೆ.
ಇನ್ನು ಪಶ್ಚಿಮ ಬಂಗಾಳದಲ್ಲಿ, ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದ ಜವಾಹರ್ ಸಿರ್ಕಾರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಆರಾಮವಾಗಿ ಈ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.