ಬದಿಯಡ್ಕ: ಎಡನೀರು ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳನ್ನು ಪೊಲೀಸ್ ಅಧಿಕೃತರು ಕೂಡಲೇ ಬಂಧಿಸಿ ಇಂಥಹ ವಿಕೃತಿ ಮನಸ್ಥಿತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಮಾಡಬೇಕೆಂದು ವಿ.ಹಿಂ.ಪ ಒತ್ತಾಯಿಸಿದೆ.
ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದಿರುಗುವಾಗ ಕಾಸರಗೋಡಿನ ಬೋವಿಕ್ಕಾನ–ಇರಿಯಣ್ಣಿ ಮಾರ್ಗ ಮಧ್ಯೆ ಸ್ವಾಮೀಜಿಗಳು ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದು ವಾಹನದ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿರುವುದು ಅಕ್ಷಮ್ಯ. ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಹಾಗೂ ಹಿಂದೂ ಸಮಾಜದ ಆಧರಣೀಯರು, ಮಾರ್ಗದರ್ಶಕರಾಗಿರುವ, ಆಧ್ಯಾತ್ಮಿಕ ಗುರು ಎಡನೀರು ಸಂಸ್ಥಾನದ ಶ್ರೀಗಳ ಮೇಲೆ ನಡೆದಿರುವ ಈ ದಾಳಿಯು ಹಿಂದೂ ಸಮುದಾಯದವರ ಮೇಲೆ ನಡೆಸಿರುವ ದಾಳಿಯಾಗಿದೆ. ಇಂಥಹ ಜಿಹಾದಿ ಮನಸ್ಥಿತಿಯ ಘಟನೆಗಳನ್ನು ಇಡೀ ಹಿಂದೂ ಸಮಾಜವು ಒಟ್ಟಾಗಿ ಖಂಡಿಸಬೇಕು ಎಂಬುದಾಗಿ ನೇತಾರರು ಅಭಿಪ್ರಾಯಪಟ್ಟರು.
ಪೊಲೀಸ್ಅಧಿಕಾರಿಗಳು ಸ್ವಾಮೀಜಿ ಮೇಲಿನ ಹಲ್ಲೆ ಯತ್ನ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಎಡನೀರು ಶ್ರೀಗಳಿಗೆ ಸೂಕ್ತ ಭದ್ರತೆಯನ್ನು ಪೊಲೀಸ್ ಕಡೆಯಿಂದ ಕಲ್ಪಿಸಬೇಕೆಂದು ಹೇಳಿಕೆ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸತ್ಸಂಗ ಸಹ ಸಂಯೋಜಕರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಜಿಲ್ಲಾ ಉಪಾಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲು, ಜಿಲ್ಲಾ ಸಹ ಕಾರ್ಯದರ್ಶಿಗಳಾದ ಗಣೇಶ ಮಾವಿನಕಟ್ಟೆ, ಸುರೇಶ ಬಾಬು ಕಾನತ್ತೂರ್, ಜಿಲ್ಲಾ ಧರ್ಮ ಪ್ರಸಾರ ಪ್ರಮುಖರಾದ ವಾಮನ ಆಚಾರ್ಯ ಬೋವಿಕಾನ, ಜಿಲ್ಲಾ ಧರ್ಮಾಚಾರ್ಯ ಪ್ರಮುಖರಾದ ಡಾ. ಜಯಪ್ರಕಾಶ್ ತೊಟ್ಟೆತೋಡಿ, ಕಾಸರಗೋಡು ಗ್ರಾಮಾಂತರ ಪ್ರಖಂಡ ಉಪಾಧ್ಯಕ್ಷರಾದ ಕೃಷ್ಣನ್ ಅಮ್ಮಂಗೋಡು ಮೊದಲಾದವರು ಸ್ವಾಮೀಜಿಗಳನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದರು
ಇಂದು ಬದಿಯಡ್ಕದಲ್ಲಿ ಪ್ರತಿಭಟನೆ: ಇಂದು ಸಂಜೆ 6ಕ್ಕೆ ಬದಿಯಡ್ಕದಲ್ಲಿ ವಿ.ಹಿಂ.ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಬದಿಯಡ್ಕ ಗಣೇಶ ಮಂದಿರದಿಂದ ಮೆರವಣಿಗೆ ಹೊರಟು ಪೇಟೆಯಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಜಿಲ್ಲೆಯ ಹಲವು ಪಂಚಾಯತ್ ಕೇಂದ್ರಗಳಲ್ಲಿ ಪ್ರತಿಭಟನೆಗೆ ಹಿಂದೂ ಸಂಘಟನೆಗಳು ಮುಂದಾಗುತ್ತಿರುವುದಾಗಿ ಮಾಹಿತಿ ಲಭಿಸಿದೆ.