HEALTH TIPS

ವಕ್ಫ್ ಸಂಸದೀಯ ಸಮಿತಿ ಅಧಿಕಾರಾವಧಿ ವಿಸ್ತರಿಸಲು ಸರ್ವಾನುಮತದ ನಿರ್ಧಾರ

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯು ತನ್ನ ಅಧಿಕಾರಾವಧಿಯನ್ನು ಮುಂದಿನ ಬಜೆಟ್ ಅಧಿವೇಶನದ ಕೊನೆಯ ದಿನದವರೆಗೆ ವಿಸ್ತರಿಸಲು ಬುಧವಾರ ಸರ್ವಾನುಮತದಿಂದ ನಿರ್ಧರಿಸಿದೆ.

ಇದಕ್ಕೂ ಮೊದಲು ಸಮಿತಿಯ ಕರಡು ವರದಿಯನ್ನು ಅಂಗೀಕರಿಸಲು ಸಿದ್ಧವಾಗಿದ್ದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕ ಪಾಲ್ ಅವರ ನಿಲುವಿನಿಂದಾಗಿ, ಸಭೆಯು ವಿಪಕ್ಷಗಳ ಸದಸ್ಯರ ಆಕ್ರೋಶದ ಪ್ರತಿಭಟನೆಗೂ ಸಾಕ್ಷಿಯಾಯಿತು.

ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿ, ಪಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಸಭೆಯಲ್ಲಿ ಕೆಲ ಸಮಯ ಗದ್ದಲದ ವಾತಾವರಣ ಉಂಟಾಯಿತು. ಪಾಲ್ ಮತ್ತು ಸಮಿತಿಯ ಬಿಜೆಪಿ ಸದಸ್ಯರು ವಿಪಕ್ಷ ಸದಸ್ಯರನ್ನು ಮನವೊಲಿಸಿದ ನಂತರ ವಾತಾವರಣ ತಿಳಿಯಾಯಿತು.

'ವಕ್ಫ್ ಮತ್ತು ರಾಜ್ಯ ಸರ್ಕಾರಗಳ ನಡುವೆ ವಿವಾದಗಳಿರುವ ಆರು ರಾಜ್ಯಗಳು ಸೇರಿದಂತೆ ಇತರ ಕೆಲವು ಮಧ್ಯಸ್ಥಗಾರರ ಅಹವಾಲು ಆಲಿಸಬೇಕಿರುವುದರಿಂದ ಸಮಿತಿಯು ತನ್ನ ಅಭಿಪ್ರಾಯದಲ್ಲಿ ಸರ್ವಾನುಮತವನ್ನು ಹೊಂದಿದೆ. ವರದಿ ಸಲ್ಲಿಸಬೇಕಿರುವ ಗಡುವನ್ನು ವಿಸ್ತರಿಸುವ ಅವಶ್ಯಕತೆಯಿದೆ ಎಂಬುದು ನಮ್ಮ ಭಾವನೆ' ಎಂದು ಬಿಜೆಪಿ ಸಂಸದ ಪಾಲ್‌ ಸುದ್ದಿಗಾರರಿಗೆ ತಿಳಿಸಿದರು.

2025ರ ಬಜೆಟ್ ಅಧಿವೇಶನದ ಕೊನೆಯ ದಿನದವರೆಗೆ, ಸದನಕ್ಕೆ ತನ್ನ ವರದಿ ಸಲ್ಲಿಸುವ ಗಡುವು ವಿಸ್ತರಿಸಲು ಸಮಿತಿಯು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಲಿದೆ ಎಂದು ಬಿಜೆಪಿ ಸಂಸದ ಮತ್ತು ಸಮಿತಿಯ ಸದಸ್ಯ ಅಪರಾಜಿತಾ ಸಾರಂಗಿ ಕೂಡ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಪಾಲ್ ಅವರು ಲೋಕಸಭೆಯಲ್ಲಿ ನಿರ್ಣಯವನ್ನು ಮಂಡಿಸುವ ಸಾಧ್ಯತೆಯಿದೆ. ಅಲ್ಲದೆ, ಸಮಿತಿಯು ವಿವಿಧ ಮಧ್ಯಸ್ಥಗಾರರನ್ನು ಭೇಟಿ ಮಾಡಲು ಕೆಲವು ರಾಜ್ಯಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಪ್ರತಿಭಟನೆಗೆ ಕಾರಣವಾಗಿದ್ದು:

ನವೆಂಬರ್ 21 ರಂದು ಸಮಿತಿಯ ಕೊನೆಯ ಸಭೆಯ ನಂತರ, ಕರಡು ವರದಿ ಸಿದ್ಧವಾಗಿದೆ. ಮಧ್ಯಸ್ಥಗಾರರೊಂದಿಗೆ ಸಮಿತಿಯ ಸಮಾಲೋಚನೆ ಮುಗಿದಿದೆ. ಸದಸ್ಯರು ಈಗ ವರದಿಯ ಬಗ್ಗೆ ಚರ್ಚಿಸುತ್ತಾರೆ. ಯಾವುದೇ ಬದಲಾವಣೆಗಳು ಇದ್ದರೆ ಸೂಚಿಸಲಿದ್ದಾರೆ ಎಂದು ಪಾಲ್ ಹೇಳಿದ್ದರು.

ಬುಧವಾರದ ಸಭೆಯಲ್ಲಿ ಪಾಲ್‌ ಅವರ ಈ ಹೇಳಿಕೆಗೆ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು. ಸಮಿತಿಯ ಅಧಿಕಾರಾವಧಿ ವಿಸ್ತರಿಸುವ ಬಗ್ಗೆ ಲೋಕಸಭೆ ಸ್ಪೀಕರ್‌ ಬಿರ್ಲಾ ಅವರಿಂದ ಭರವಸೆ ಸಿಕ್ಕಿದೆ ಎಂದರು.

ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, 'ಸಭಾಧ್ಯಕ್ಷರಿಂದ ನಮಗೆ ಸಿಕ್ಕಿರುವ ಭರವಸೆ ಸಮಿತಿ ಅಧ್ಯಕ್ಷರಿಂದ ಬಂದಿರುವುದಲ್ಲ. ಸ್ಪೀಕರ್ ಒಂದು ರೀತಿ ಹೇಳಿದರೆ ಅಧ್ಯಕ್ಷರು ಇನ್ನೊಂದು ರೀತಿ ಹೇಳುತ್ತಾರೆ. ಅಧ್ಯಕ್ಷರ ಕ್ರಮವನ್ನು ಯಾರೋ ಪ್ರಭಾವಿ ಸಚಿವರು ನಿರ್ದೇಶಿಸುತ್ತಿದ್ದಾರೆ' ಎಂದು ಆರೋಪಿಸಿದರು.

'ಎಲ್ಲ ಮಧ್ಯಸ್ಥಗಾರರ ಮಾತುಗಳನ್ನು ಇನ್ನೂ ಆಲಿಸಿಲ್ಲ' ಎಂದು ಡಿಎಂಕೆ ಸಂಸದ ಎ. ರಾಜಾ ಹೇಳಿದರೆ, 'ಸಮಿತಿಯು ನಿಗದಿತ ಪ್ರಕ್ರಿಯೆಯನ್ನು ಅನುಸರಿಸಿದರೆ ನವೆಂಬರ್ 29 ರೊಳಗೆ ತನ್ನ ವರದಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ' ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಎಎಪಿ ಸಂಸದ ಸಂಜಯ್ ಸಿಂಗ್ ಕೂಡ ಪಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಮಿತಿಯ ಕಾರ್ಯವೈಖರಿಯನ್ನು ಟೀಕಿಸಿದರು. ಆದರೆ, ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಇದನ್ನು ನಗೆಪಾಟಲು ಎಂದು ಜರಿದರು.

ಆದಾಗ್ಯೂ, ಪಾಲ್ ಮತ್ತು ಬಿಜೆಪಿ ಸಂದರಾದ ನಿಶಿಕಾಂತ್ ದುಬೆ ಮತ್ತು ಸಾರಂಗಿ ಅವರು ವಿರೋಧ ಪಕ್ಷದ ಸದಸ್ಯರನ್ನು ಮನವೊಲಿಸಲು ಯಶಸ್ವಿಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries