ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುಣಾವಣೆಯ ಮತದಾನ ಪ್ರಮಾಣ ಏಕಾಏಕಿ ಹೆಚ್ಚಳವಾಗಲು ಏನು ಕಾರಣ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
'ಮತದಾನ ನಡೆದ ನವೆಂಬರ್ 20ರಂದು ಸಂಜೆ 5ರ ವೇಳೆಗೆ ಶೇ 58.22 ರಷ್ಟು ಮತದಾನ ಆಗಿರುವುದನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ-ಅಂಶ ತೋರಿಸಿದೆ.
ಆದರೆ, ಅದೇ ರಾತ್ರಿ 11.30ರ ಅಂಕಿ-ಅಂಶವು ಮತದಾನ ಪ್ರಮಾಣ ಶೇ 65.02 ಹಾಗೂ ಮರುದಿನ ಪ್ರಕಟಿಸಿದ ಅಂತಿಮ ಅಂಕಿ-ಅಂಶ ಶೇ 66.05 ಆಗಿರುವುದನ್ನು ತೋರಿಸಿದೆ. ಅಲ್ಪ ಅವಧಿಯಲ್ಲಿ ಮತದಾನ ಪ್ರಮಾಣ ಶೇ 7.83ರಷ್ಟು ಹೆಚ್ಚಲು ಏನು ಕಾರಣ' ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಗುರುವಾರ ಪ್ರಶ್ನಿಸಿದ್ದಾರೆ.
'ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆಯೇ ಎಂಬ ಬಗ್ಗೆ ಸಂದೇಹ ಹುಟ್ಟುಹಾಕಿರುವ ಕಾರಣ ಆಯೋಗವು ಸ್ಪಷ್ಟನೆ ನೀಡಬೇಕು. ಸಂಜೆ 5.30ರ ಬಳಿಕ ಅಷ್ಟೊಂದು ಮಂದಿ ಮತ ಹಾಕಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಮತಗಟ್ಟೆಗಳ ವಿಡಿಯೊಗಳನ್ನು ಬಿಡುಗಡೆ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.