ಕುಂಬಳೆ: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ ಮುಂದುವರಿದಿದೆ. ಶುಕ್ರವಾರ ಸಂಜೆ ಮತ್ತೆ ಪೇಟೆಯಲ್ಲಿ ಗುಂಪುಗೂಡಿ, ಪರಸ್ಪರ ಹೊಡೆದಾಡಿಕೊಂಡ ವಿದ್ಯಾರ್ಥಿ ತಂಡವನ್ನು ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಕೆ.ಪಿ ವಿನೋದ್‍ಕುಮಾರ್ ನೇತೃತ್ವದ ಪೊಲಿಸರ ತಂಡ ಚದುರಿಸಿದೆ. ಇವರಲ್ಲಿ ಕೆಲವು ವಿದ್ಯಾರ್ಥಿಘಳನ್ನು ವಶಕ್ಕೆ ತೆಗೆದು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ.
ಕಳೆದ ಹಲವು ಸಮಯದಿಂದ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳ ಎರಡು ತಂಡಗಳಾಗಿ ಹೊಡೆದಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಕಳೆದ ನಾಲ್ಕು ದಿವಸಗಳಿಂದ ಪೇಟೆಯಲ್ಲಿ ಗುಂಪುಗೂಡಿ, ಪರಸ್ಪರ ವಾಗ್ವಾದದಲ್ಲಿ ನಿರತರಾಗುತ್ತಿದ್ದ ತಂಡ ಶುಕ್ರವಾರ ಸಂಜೆ ಹೊಡೆದಾಡಿಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘ, ಪೊಲೀಸ್, ಅಧ್ಯಾಪಕರಿಗೆ ಸಾಧ್ಯವಾಗದಿರುವುದು ಹೆತ್ತವರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕೆಲವು ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಜತೆ ವಾಗ್ವಾದ ನಡೆಸುತ್ತಿದ್ದು, ಇದು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗುತ್ತಿದೆ. ಶಾಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಗುಂಪುಘರ್ಷಣೆ, ಕಲಿಕೆಯಲ್ಲಿ ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡುತ್ತಿರುವುದಾಗಿ ಪೋಷಕರು ತಿಳಿಸುತ್ತಾರೆ.