ಕಾಸರಗೋಡು: ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳ ವಾಹನ ಆಕ್ರಮಿಸಿ, ಸಂಚಾರಕ್ಕೆ ತಡೆಯೊಡ್ಡಿದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಪೊಲೀಸರ ಕ್ರಮ ಖಂಡಿಸಿ ಅಖಿಲ ಭಾರತೀಯ ಸಂತ ಸಮಿತಿಯ ಕರ್ನಾಟಕ, ಕೇರಳ, ತಮಿಳುನಾಡು ಘಟಕದ ಯತಿಗಳು ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರ ಎಡನೀರು ಮಠದಲ್ಲಿ ಶ್ರೀಸಚ್ಛಿದಾನಂದ ಭಾರತೀ ಶ್ರೀಪಾದರ ಉಪಸ್ಥಿತಿಯಲ್ಲಿ ಸಭೆ ನಡೆಸಿದ ಯತಿವರ್ಯರು ಖಂಡನಾ ನಿರ್ಣಯ ಕೈಗೊಂಡ ನಂತರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಸಂತ ಸಮಿತಿಯ ನಿಯೋಗದಲ್ಲಿ ಕರ್ನಾಟಕ ರಾಜ್ಯಾಧ್ಯಕ್ಷ ಓಂಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಸಮಿತಿ ಪದಾಧಿಕಾರಿಗಳಾದ ಮಂಗಳೂರು ಓಂಶ್ರೀ ಮಠದ ಮಾತಾಶ್ರೀ ಓಂಶ್ರೀ ಶಿವಧ್ಯಾನ ಮಹಿ ಸರಸ್ವತಿ, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಕಣಿಯೂರು, ರಾಜೇಶ್ ನಾಥ್ ಗುರೂಜಿ, ಜಯಪ್ರಕಾಶ್ ಗುರೂಜಿ, ಕೇರಳ ಘಟಕದ ಅಧ್ಯಕ್ಷ ಶ್ರೀಪ್ರಭಾಕರಾನಂದ ಸರಸ್ವತಿ, ಉಪಾಧ್ಯಕ್ಷ ಸ್ವಾಮಿ ಸಾಯಿ ಈಶ್ವರಾನಂದ, ಸ್ವಾಮಿ ಕೈಲಾಸಾನಂದ, ಸ್ವಾಮಿ ವಿಶ್ವಾನಂದ, ವಿಶ್ವಕರ್ಮ ಶಂಕರಾಚಾರ್ಯ ಪೀಠದ ದಂಡಿಸ್ವಾಮಿ ಸಾಧು ಕೃಷ್ಣಾನಂದ ಸರಸ್ವತಿ, ಚೆರುಕೋಡು ಆಂಜನೇಯಾಶ್ರಮದ ಸ್ವಾಮಿ ರಮಾನಂದನಾಥ್ ಚೈತನ್ಯ, ತಮಿಳುನಾಡು ಘಟಕದ ಸ್ವಾಮಿ ವಿಶ್ವಲಿಂಗ ತಂಬಿರಾನ್, ಶ್ರೀ ಯುಕ್ತೇಶ್ವರ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದರು.
ಎಡನೀರು ಶ್ರೀಗಳ ವಾಹನಕ್ಕೆ ತಡೆಯೊಡ್ಡಿ ಹಾನಿಯೆಸಗಿರುವುದು ನಿರ್ಲಕ್ಷಿತ ವಿಚಾರವಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ, ಆರೋಪಿಗಳನ್ನು ಬಂಧಿಸದಿರುವುದು ಖಂಡನೀಯ. ಇದು ಯತಿ ಸಮೂಹಕ್ಕೆ ಆತಂಕ ತಂದೊಡ್ಡಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.