ಕೋಯಿಕ್ಕೋಡ್: ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿನ ಬಳಿಕ ಇಂದು (ಶನಿವಾರ) ಕ್ಷೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಿಂದ ಪ್ರಜಾಸತ್ತಾತ್ಮಕ ನಡವಳಿಕೆ ಪಾಲನೆಯಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
'ಇಂದು ನಾವು ಬಿಜೆಪಿಯಿಂದ ಎದುರಿಸುತ್ತಿರುವ ರಾಜಕೀಯ ಸವಾಲುಗಳು ಭೂಕುಸಿತದಂತಿವೆ. ಯಾವುದೇ ನಿಯಮ ಅಥವಾ ವಿವರಣೆಗಳಿಲ್ಲ' ಎಂದು ಕಿಡಿಕಾರಿದ್ದಾರೆ.
'ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಯಾವುದೇ ಪ್ರಜಾಸತ್ತಾತ್ಮಕ ನಡವಳಿಕೆಗಳನ್ನು ಪಾಲಿಸುತ್ತಿಲ್ಲ. ಸಾಮಾನ್ಯ ರಾಜಕೀಯ ಹೋರಾಟದಲ್ಲೂ ಅದನ್ನು ಅನುಸರಿಸುತ್ತಿಲ್ಲ' ಎಂದು ಹೇಳಿದ್ದಾರೆ.
ಈ ವೇಳೆ ವಯನಾಡಿನ ಜನತೆಯ ದನಿಯಾಗುವುದಾಗಿ ಪ್ರಿಯಾಂಕಾ ಭರವಸೆ ನೀಡಿದ್ದಾರೆ.
'ನಾನು ನಿಮ್ಮ ದನಿಯಾಗಲಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸುತ್ತೇನೆ. ನಿಮ್ಮ ನಂಬಿಕೆ, ಮೌಲ್ಯ ಹಾಗೂ ಆಕಾಂಕ್ಷೆಗಳ ಈಡೇರಿಕೆಗಾಗಿ ಕೊನೆಯವರೆಗೂ ನಿಲ್ಲುತ್ತೇನೆ' ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರ ಸಾರ್ವಜನಿಕ ಸಮಾವೇಶದಲ್ಲಿ ಸಹೋದರ ರಾಹುಲ್ ಗಾಂಧಿ ಉಪಸ್ಥಿತರಿದ್ದರು.