ಮುಂಬೈ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವ ಭಾರತದ ಚುನಾವಣಾ ಆಯೋಗದ ನಿರ್ಧಾರ ಕಾನೂನು ಬಾಹಿರವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧದ ವಿರುದ್ಧ ಮುಂಬೈ ಮೂಲದ ವಕೀಲ ಉಜಾಲಾ ಯಾದವ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಮುಖ್ಯ ನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ವಿಭಾಗೀಯ ಪೀಠವು ವಜಾಗೊಳಿಸಿದೆ.
ಮತದಾರರು ತಮ್ಮ ಮೊಬೈಲ್ ಫೋನ್‌ಗಳನ್ನು ಮತಗಟ್ಟೆಗಳಿಗೆ ಕೊಂಡೊಯ್ಯಲು ಅನುಮತಿ ನೀಡುವಂತೆ ಹಾಗೂ ಡಿಜಿಲಾಕರ್ ಅಪ್ಲಿಕೇಶನ್ ಮೂಲಕ ಗುರುತಿನ ಚೀಟಿ ತೋರಿಸಿ ಮತದಾನ ಮಾಡಲು ಅನುಮತಿ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿತ್ತು.
ಚುನಾವಣಾ ಪ್ರಕ್ರಿಯೆಯನ್ನು ಸುಗಮ ನಿರ್ವಹಿಸುವ ಸಲುವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ ಎಂದು ಪೀಠ ಹೇಳಿದೆ.
ಚುನಾವಣೆ ನಡೆಸುವುದು ಒಂದು ತೊಡಕಿನ ಪ್ರಕ್ರಿಯೆಯಾಗಿದೆ. ಇಂತಹ ಸಂದರ್ಭದಲ್ಲಿ ನೀವು (ಅರ್ಜಿದಾರರು) ಡಿಜಿಲಾಕರ್‌ನಲ್ಲಿ ದಾಖಲೆಗಳನ್ನು ತೋರಿಸಲು ಅನುಮತಿ ನೀಡಿ ಎಂದು ಕೇಳುತ್ತಿದ್ದಿರಿ. ಪರಿಶೀಲನೆಗಾಗಿ ತಮ್ಮ ದಾಖಲೆಯನ್ನು ಕೇವಲ ಡಿಜಿಟಲ್ ಲಾಕರ್‌ಗಳು ಅಥವಾ ಫೋನ್‌ಗಳ ಮೂಲಕ ಮಾತ್ರ ತೋರಿಸಲು ಯಾವುದೇ ವ್ಯಕ್ತಿಗೆ ಹಕ್ಕಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮತಗಟ್ಟೆಗಳಲ್ಲಿ ಫೋನ್‌ಗಳನ್ನು ಇಡಲು ಸೂಕ್ತ ವ್ಯವಸ್ಥೆ ಮಾಡದ ಕಾರಣ ಮತದಾರರು ತಮ್ಮ ಹಕ್ಕು ಚಲಾಯಿಸಲು ನಿರುತ್ಸಾಹ ತೋರುತ್ತಿದ್ದಾರೆ ಎಂದೂ ಪಿಐಎಲ್ ಹೇಳಲಾಗಿತ್ತು.