ಹೈದರಾಬಾದ್: ಖ್ಯಾತ ಅಧ್ಯಾತ್ಮಿಕ ಗುರು ಚಾಗಂಟಿ ಕೋಟೇಶ್ವರ ರಾವ್ ಅವರನ್ನು ಸಲಹೆಗಾರರನ್ನಾಗಿ ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರ ಶನಿವಾರ ನೇಮಕ ಮಾಡಿದೆ.
ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗಿದೆ. ಅವರನ್ನು 'ವಿದ್ಯಾರ್ಥಿಗಳು, ನೈತಿಕತೆ ಹಾಗೂ ಮೌಲ್ಯಗಳ' ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.
ಸನಾತನ ಧರ್ಮ ಕುರಿತ ಉಪನ್ಯಾಸಗಳಿಂದಾಗಿ ಕೋಟೇಶ್ವರ ರಾವ್ ಪ್ರಸಿದ್ಧರಾಗಿದ್ದಾರೆ. ರಾಮಾಯಣ, ಭಾಗವತ, ಮಹಾಭಾರತ ಹಾಗೂ ಭಗವದ್ಗೀತೆ ಕುರಿತು ಅವರು ತೆಲುಗು ಭಾಷೆಯಲ್ಲಿ ನೀಡುವ ಪ್ರವಚನಗಳಿಂದ ವಿಶ್ವದಾದ್ಯಂತ ಇರುವ ತೆಲುಗು ಭಾಷಿಕರಲ್ಲಿ ಜನಪ್ರಿಯತೆ ಪಡೆದಿದ್ದಾರೆ. ತೆಲುಗು ಭಾಷಿಕ ಹಿಂದೂಗಳು ದೊಡ್ಡಸಂಖ್ಯೆಯಲ್ಲಿ ಅವರ ಅನುಯಾಯಿಗಳಾಗಿದ್ದಾರೆ.
ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿದ್ದರೂ ಕೋಟೇಶ್ವರ ರಾವ್ ಸಲಹೆಗಾರರಾಗಿ ಇರುತ್ತಿದ್ದರು ಎಂಬುದು ವಿಶೇಷ. 2016ರಲ್ಲಿ ಎನ್.ಚಂದ್ರಬಾಬು ನಾಯ್ಡು ಅವರ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ ಕೋಟೇಶ್ವರ ರಾವ್ ಅವರನ್ನು ಸಾಂಸ್ಕೃತಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು.
2023ರಲ್ಲಿ, ವೈ.ಎಸ್.ಜಗನ್‌ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಅವನ್ನು ಟಿಟಿಡಿಯ ಧಾರ್ಮಿಕ ಸಲಹೆಗಾರರಾಗಿ ನೇಮಕ ಮಾಡಿತ್ತು. ಈಗ ಮತ್ತೊಮ್ಮೆ ಅವರು ರಾಜ್ಯ ಸರ್ಕಾರದ ಸಲಹೆಗಾರ ಹುದ್ದೆಗೆ ನೇಮಕಗೊಂಡಿದ್ದಾರೆ.
ನಿಗಮಗಳು, ಮಂಡಳಿಗಳು ಸೇರಿದಂತೆ ಹಲವು ಸ್ಥಾನಗಳಿಗೆ ಒಟ್ಟು 59 ಜನರನ್ನು ಆಂಧ್ರಪ್ರದೇಶ ಸರ್ಕಾರ ನೇಮಕ ಮಾಡಿದ್ದು, ಮುಖ್ಯಮಂತ್ರಿ ನಾಯ್ಡು ಅವರು ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. ಈ ಪೈಕಿ, ಅಂಗಪಕ್ಷವಾದ ಜನಸೇನಾದ 9 ನಾಯಕರು ಹಾಗೂ ಬಿಜೆಪಿಯ ಒಬ್ಬರು ನೇಮಕಗೊಂಡಿದ್ದಾರೆ.