ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ, ಇಮ್ರಾನ್ ಅವರ ಬೆಂಬಲಿಗರು ಕೈಗೊಂಡಿರುವ ಪ್ರತಿಭಟನಾ ಮೆರವಣಿಗೆ ಸೋಮವಾರವೂ ಮುಂದುವರಿದಿದೆ.
ಬೆಲಾರಸ್‌ನ ಉನ್ನತ ಮಟ್ಟದ ನಿಯೋಗವು ಇಸ್ಲಾಮಾಬಾದ್‌ಗೆ ರಾಜತಾಂತ್ರಿಕ ಭೇಟಿ ನೀಡಿದ್ದು, ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ನಿಷೇಧಾಜ್ಞೆ ಜಾರಿಗೊಳಿಸಿದೆ.
ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗಳನ್ನು ಆಯ್ದ ಪ್ರದೇಶಗಳಲ್ಲಿ ಸಂಪೂರ್ಣವಾಗಿ ತಡೆಹಿಡಿಯಲಾಗಿದೆ.
ಇಸ್ಲಾಮಾಬಾದ್‌ನತ್ತ ಹೊರಟಿದ್ದ ಇಮ್ರಾನ್ ಖಾನ್ ಬೆಂಬಲಿಗರನ್ನು ಪೊಲೀಸರು ಪಂಜಾಬ್‌ನ ಹಾರೊ ಬಳಿ ಭಾನುವಾರ ತಡರಾತ್ರಿ ತಡೆದಿದ್ದರು. ಬಳಿಕ, ಮೆರವಣಿಗೆಯನ್ನು ಸೋಮವಾರ ಬೆಳಿಗ್ಗೆ ಪುನರಾರಂಭ ಮಾಡಿರುವ ಪ್ರತಿಭಟನಕಾರರು, ಇಸ್ಲಾಮಾಬಾದ್‌ನತ್ತ ಪಯಣ ಬೆಳೆಸಿದ್ದಾರೆ.
ಪ್ರತಿಭಟನಕಾರರು ಇಸ್ಲಾಮಾಬಾದ್ ಪ್ರವೇಶಿಸದಂತೆ ಪೊಲೀಸರು ಲಾಹೋರ್ ಬಳಿ ಹೆದ್ದಾರಿಗಳಿಗೆ ಕಂಟೈನರ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ, ರಸ್ತೆ ಬಂದ್ ಮಾಡಿದ್ದರು. ಆದರೆ, ಕ್ರೇನ್‌ನೊಂದಿಗೆ ಬಂದಿದ್ದ ಪ್ರತಿಭಟನಕಾರರು, ಕಂಟೈನರ್‌ಗಳನ್ನು ತೆರವುಗೊಳಿಸಿ ಮುನ್ನುಗ್ಗಿದ್ದಾರೆ.
ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಹಾಗೂ ಖೈಬರ್ ಪಂಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ನೇತೃತ್ವದಲ್ಲಿ ಪಿಟಿಐ ಪಕ್ಷದ ಕಾರ್ಯಕರ್ತರು ಪೆಶಾವರದಿಂದ ಇಸ್ಲಾಮಾಬಾದ್‌ವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದಾರೆ. ದೇಶದಾದ್ಯಂತ ನವೆಂಬರ್ 24ರಿಂದ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ಇಮ್ರಾನ್‌ಖಾನ್ ಅವರು ನ.13ರಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು.