ನವದೆಹಲಿ: ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಹಲವು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಜತೆಗೆ, ಮಧ್ಯಾಹ್ನದ ಊಟ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಶಾಲಾ-ಕಾಲೇಜುಗಳಲ್ಲಿ ದೈಹಿಕ ತರಗತಿಗಳನ್ನು ಪುನರಾರಂಭಿಸಲು ಪರಿಗಣಿಸುವಂತೆ ವಾಯುಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರನ್ನು ಒಳಗೊಂಡ ನ್ಯಾಯಪೀಠವು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮನೆಗಳಲ್ಲಿ ಶುದ್ಧ ಗಾಳಿಯನ್ನು ಸೇವಿಸಲು ಆಗುತ್ತಿಲ್ಲ. ಆದ್ದರಿಂದ ಮನೆಯಲ್ಲಿರುವ ಮಕ್ಕಳು ಮತ್ತು ಶಾಲೆಗೆ ಹೋಗುವವರ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಹೇಳಿದೆ.
ದೆಹಲಿಯ ವಾಯು ಗುಣಮಟ್ಟ ತೀವ್ರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್‌ಎಪಿ-4ರ) ಅಡಿಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಸಲು ನಿರಾಕರಿಸಿದ ನ್ಯಾಯಪೀಠ, ವಾಯು ಗುಣಮಟ್ಟದ ಸೂಚ್ಯಂಕವು (ಎಕ್ಯೂಐ) ಸುಧಾರಿಸದ ಹೊರತು ಜಿಆರ್‌ಎಪಿ-3 ಅಥವಾ ಜಿಆರ್‌ಎಪಿ-2ಕ್ಕಿಂತ ಕಡಿಮೆ ನಿರ್ಬಂಧಗಳನ್ನು ಆದೇಶಿಸಲು ಸಾಧ್ಯವಿಲ್ಲ ಎಂದು ತಾಕೀತು ಮಾಡಿತು.
ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕಳಪೆ ಹಂತದಲ್ಲಿಯೇ ಮುಂದುವರಿದಿದ್ದು, ಸೋಮವಾರವೂ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 373 ದಾಖಲಾಗಿದೆ. ಅದರ ಜತೆಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್) ವ್ಯಾಪ್ತಿಯಲ್ಲಿ ಹದಗೆಡುತ್ತಿರುವ ವಾಯುಮಾಲಿನ್ಯ ತಡೆಗಟ್ಟಲು ಹಾಗೂ ವಾಯು ಗುಣಮಟ್ಟ ಸುಧಾರಿಸಲು ಐವರು ಸದಸ್ಯರ ಕಾರ್ಯಪಡೆ ರಚಿಸಲಾಗಿದೆ. ಪ್ರಾಧಿಕಾರ ನೀಡುವ ಸಲಹೆ, ಸೂಚನೆಗಳ ಅನುಷ್ಠಾನ ಕುರಿತು ಮೇಲ್ವಿಚಾರಣೆಗೆ 17 ಸಂಚಾರಿ ಪರಿಶೀಲನಾ ದಳಗಳನ್ನು ರಚಿಸಲಾಗಿದೆ ಎಂದು ಈಚೆಗೆ ವಾಯು ಗುಣಮಟ್ಟ ನಿರ್ವಹಣೆ ಪ್ರಾಧಿಕಾರವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿತ್ತು.