ಕಾಸರಗೋಡು: ಜಿಲ್ಲೆಯ ಬೋವಿಕ್ಕಾನ, ಇರಿಯಣ್ಣಿ ಸೇರಿದಂತೆ ಮಲೆನಾಡುಪ್ರದೇಶದಲ್ಲಿ ಸಂಚರಿಸುತ್ತಿರುವ ಚಿರತೆಯನ್ನು ಪಟಾಕಿ ಸಿಡಿಸಿ ಕಾಡಿಗೆ ಓಡಿಸುವ ಪ್ರಕ್ರಿಯೆಗೆ ಅರಣ್ಯಾಧಿಕಾರಿಗಳು ಚಾಲನೆ ನೀಡಿದ್ದಾರೆ.
ಅರಣ್ಯ ಇಲಾಖೆ ರೇಂಜ್ ಅಧಿಕಾರಿ ಸಿ.ವಿ ವಿನೋದ್‍ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಚಿರತೆ ಸಂಚಾರದ ಪ್ರದೇಶಗಳನ್ನು ಗುರುತಿಸಿ, ಮೂರು ತಂಡಗಳಾಗಿ ಮಂಜಕಲ್, ಕುಣಿಯೇರಿ, ನೆಯ್ಯಂಗಯ, ಕೊಟ್ಟಂಗುಳಿ, ಕಲ್ಲಳಿಕ್ಕಾಲ್ ಪ್ರದೇಶದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಚಿರತೆ ಸಂಚಾರದಿಂದ ಜನತೆ ಕಂಗೆಟ್ಟಿದ್ದು, ಅಧಿಕಾರಿಗಳು ಬೋನು ಇರಿಸಿ ಸೆರೆಹಿಡಿಯಲು ಮುಂದಾಗಿದ್ದರೂ, ಪ್ರಯೋಜನವಾಗಿಲ್ಲ. ಕಾಡಿನಿಂದ ನಾಡಿಗಿಳಿದು ವಿವಿಧ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಯನ್ನು ಮತ್ತೆ ಕಾಡಿಗೆ ಕಳುಹಿಸಲು ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.