ಕಾಸರಗೋಡು : ರಾಜಕೀಯ ಸಿದ್ಧಾಂತದೊಂದಿಗೆ ಸಾಮಾಜಿಕ ಬದ್ಧತೆ ಪ್ರದರ್ಶಿಸಿದಾಗ ಮಾತ್ರ ಉತ್ತಮ ಸಹಕಾರಿ ಸಂಘಟನೆಯಾಗಿ ರೂಪುಗೊಳ್ಳಲು ಸಾಧ್ಯ ಎಂಬುದಾಗಿ ಮಾಜಿ ಸಹಕಾರ ಸಚಿವ ಜಿ.ಸುಧಾಕರನ್ ತಿಳಿಸಿದರು. ಅವರು ಕಾಸರಗೋಡು ನಗರಸಭಾಂಗಣದಲ್ಲಿ ಆಯೋಜಿಸಲಾದ ಕೇರಳ ಕೋಆಪರೇಟಿವ್ ಫೆಡರೇಶನ್ 9ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘದ ಬೆಳವಣಿಗೆಯು ಒಬ್ಬ ಸಹಕಾರಿಯ ಸಾಮಾಜಿಕ ಬದ್ಧತೆಯ ಅಳತೆಗೋಲಾಗಿ ಪರಿಗಣಿಸಬಹುದು. ಅನುಭವಿಗಳಲ್ಲದವರು ಸಹಕಾರಿ ರಂಗದ ಆಡಳಿತ ಚುಕ್ಕಾಣಿ ಹಿಡಿದಲ್ಲಿ, ಅದು ಸಂಸ್ಥೆಯ ಅವನತಿಗೂ ಹಾದಿಮಾಡಿಕೊಡಲಿರುವುದಾಗಿ ಕಿವಿಮಾತು ಹೇಳಿದರು.
ಒಕ್ಕೂಟ ರಾಜ್ಯಾಧ್ಯಕ್ಷ ಸಿ.ಎನ್.ವಿಜಯಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಮಹಾಮಂಡಳ ಸಮ್ಮೇಳನ ವೇದಿಕೆಯಲ್ಲಿ ಜಿ.ಸುಧಾಕರನ್ ಅವರನ್ನು ಸಿ.ಪಿ.ಜಾನ್ ಸನ್ಮಾನಿಸಿದರು. ಸಿ.ಪಿ.ಜಾನ್ ಮುಖ್ಯ ಭಾಷಣ ಮಾಡಿದರು. ಶಾಸಕ ಎನ್.ಎ ನೆಲ್ಲಿಕುನ್ನು ಉಪಸ್ಥಿತರಿದ್ದರು.
ಕೇರಳ ಬ್ಯಾಂಕ್ ಅನ್ನು ಪುನಃಸ್ಥಾಪಿಸಬೇಕು, ಎಲ್ಲಾ ರೀತಿಯ ಸಹಕಾರ ಸಂಘಗಳಿಗೂ ಸಾಲ ನೀಡಬೇಕು, ಸಂಘಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಲಿರುವ ಸಾಮಾನ್ಯ ಸಾಫ್ಟ್‍ವೇರ್ ಯೋಜನೆ ಕೈಬಿಡಬೇಕು, ಕೃಷಿ ಋಣ ಪರಿಹಾರ ಸಮಿತಿಯನ್ನು ಅದಾಲತ್ ನಿಗದಿತ ಸಮಯಕ್ಕೆ ನಡೆಸಬೇಕು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಕಾರ್ಯಗಳ ಹಿನ್ನೆಲೆಯಲ್ಲಿ ಸಂಚಾರಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ರೈಲು ಯೋಜನೆ ಮಂಜೂರುಗೊಳಿಸಬೇಕು, ಮಲ್ಟಿ ಸ್ಟೇಟ್ ಸಹಕಾರಿ ಸಂಘಗಳು ಜನರಿಂದ ಅಧಿಕ ಬಡ್ಡಿ ನೀಡಿ ಠೇವಣಿ ಸ್ವೀಕರಿಸುವ ಪ್ರಕ್ರಿಯೆಯನ್ನು ನಿಯಂತ್ರಿಸುವ ಬಗ್ಗೆ ನಿರ್ಣಯ ಮಂಡಿಸಲಾಯಿತು. ವಕೀಲ ಎಂ.ಪಿ ಸಾಜು ಚಟುವಟಿಕೆ ವರದಿ ಮಂಡಿಸಿದರು. ವಿ.ಕೆ.ರವೀಂದ್ರನ್ ಸ್ವಾಗತಿಸಿದರು. ಸಿ.ವಿ.ತಂಬಾನ್ ವಂದಿಸಿದರು.
ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಿ.ಎನ್.ವಿಜಯಕೃಷ್ಣನ್ ರಕ್ಷಾಧಿಕಾರಿ, ವಕೀಲ ಎಂ.ಪಿ.ಸಾಜು ಅಧ್ಯಕ್ಷ, ಡಿ.ಅಬ್ದುಲ್ಲಾ ಹಾಜಿ, ಚಕ್ರಪಾಣಿ ಉಪಾಧ್ಯಕ್ಷರು, ಸಾಜು ಜೇಮ್ಸ್ ಪ್ರಧಾನ ಕಾರ್ಯದರ್ಶಿ, ಸಿ.ಎ ಅಜೀರ್, ಕೆಸಿ ಬಾಲಕೃಷ್ಣನ್ ಜತೆ ಕಾರ್ಯದರ್ಶಿಗಳು ಹಾಗೂ ಪಿ.ಬೈಜು ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.