ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಬಲ್ವಂತ್ ಸಿಂಗ್ ರಾಜೋನಾ ಅವರ ಕ್ಷಮಾದಾನ ಅರ್ಜಿಗೆ ಸಂಬಂಧಿಸಿದಂತೆ ತಾನು ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.
ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಬಲ್ವಂತ್ ಸಿಂಗ್ ರಾಜೋನಾ ಅವರ ಕ್ಷಮಾದಾನ ಅರ್ಜಿಗೆ ಸಂಬಂಧಿಸಿದಂತೆ ತಾನು ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.
ಕ್ಷಮಾದಾನ ಅರ್ಜಿಯನ್ನು ಎರಡು ವಾರಗಳ ಒಳಗಾಗಿ ಪರಿಗಣಿಸುವಂತೆ ಪೀಠವು ರಾಷ್ಟ್ರಪತಿ ಅವರಿಗೆ ಮನವಿಯನ್ನೂ ಮಾಡಿತು.
ಆದರೆ, ಆದೇಶ ಹೊರಬಿದ್ದ ಬೆನ್ನಲ್ಲೇ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈ ಪ್ರಕರಣವು ತುಂಬಾ 'ಸೂಕ್ಷ್ಮತೆ'ಗಳನ್ನು ಒಳಗೊಂಡಿರುವ ಕಾರಣ ಆದೇಶವನ್ನು ಜಾರಿಗೆ ತರಬಾರದು. ಶುಕ್ರವಾರ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
ಕ್ಷಮಾದಾನ ಅರ್ಜಿಗೆ ಸಂಬಂಧಿಸಿದ ಕಡತವು ರಾಷ್ಟ್ರಪತಿಯವರ ಬಳಿಯಿಲ್ಲ. ಅದು ಗೃಹ ಕಾರ್ಯದರ್ಶಿಯವರ ಬಳಿಯಿದೆ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದರು. ಸಾಲಿಸಿಟರ್ ಜನರಲ್ ಅವರ ಮನವಿಗೆ ಒಪ್ಪಿಗೆ ಸೂಚಿಸಿದ ಪೀಠ, ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಿತು.
ರಾಜೋನಾ ಸಲ್ಲಿಸಿರುವ ಕ್ಷಮಾದಾನ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 25ರಂದು ಪಂಜಾಬ್ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಪ್ರತಿಕ್ರಿಯೆ ಕೇಳಿತ್ತು.
1995ರ ಆಗಸ್ಟ್ 31ರಂದು ಪಂಜಾಬ್ ಸಚಿವಾಲಯದ ಹೊರಭಾಗದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಬಿಯಾಂತ್ ಸೇರಿದಂತೆ 16 ಜನರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು 2007ರಲ್ಲಿಯೇ ಬಲ್ವಂತ್ ಸಿಂಗ್‌ಗೆ ಮರಣದಂಡನೆ ವಿಧಿಸಿತ್ತು.