ನವದೆಹಲಿ :ಮಾನವ ಕಳ್ಳ ಸಾಗಣೆದಾರರು ಉದ್ಯೋಗದ ಭರವಸೆಯೊಂದಿಗೆ ಭಾರತೀಯ ನಾಗರಿಕರು ಕಾಂಬೋಡಿಯಾಕ್ಕೆ ಬರುವಂತೆ ಆಮಿಷವೊಡ್ಡುತ್ತಾರೆ ಮತ್ತು ಬಳಿಕ ಬಲವಂತದಿಂದ ಅವರನ್ನು ಆನ್‌ಲೈನ್ ಹಗರಣಗಳು ಮತ್ತು ಸೈಬರ್ ಅಪರಾಧಗಳಲ್ಲಿ ತೊಡಗಿಸುತ್ತಾರೆ ಎನ್ನುವುದು India Today ನಡೆಸಿದ ತನಿಖೆಯು ತೋರಿಸಿದೆ.
ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ದೇಶದಲ್ಲಿ ಉದ್ಯೋಗಾಕಾಂಕ್ಷಿಗಳಿಗಾಗಿ ಸಲಹಾ ಸೂಚಿಯೊಂದನ್ನು ಹೊರಡಿಸಿದೆ. ಕಾಂಬೋಡಿಯಾದಲ್ಲಿ ಕಾನೂನುಬಾಹಿರವಾಗಿರುವ 'ಪ್ರವಾಸಿ ವೀಸಾ'ದಡಿ ಉದ್ಯೋಗಗಳನ್ನು ಹುಡುಕದಂತೆ ಅದು ಭಾರತೀಯ ಪ್ರಜೆಗಳನ್ನು ಆಗ್ರಹಿಸಿದೆ.
ಕಾಂಬೋಡಿಯಾದಲ್ಲಿ ಲಾಭದಾಯಕ ಉದ್ಯೋಗಾವಕಾಶಗಳ ಸುಳ್ಳು ಭರವಸೆಗಳಿಂದ ಆಮಿಷಕ್ಕೆ ಒಳಗಾಗುವ ಭಾರತೀಯ ಪ್ರಜೆಗಳು ಮಾನವ ಕಳ್ಳ ಸಾಗಣೆದಾರರ ಬಲೆಗೆ ಬೀಳುತ್ತಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ. ಈ ಭಾರತೀಯ ಪ್ರಜೆಗಳನ್ನು ಬಲವಂತದಿಂದ ಆನ್‌ಲೈನ್ ಹಣಕಾಸು ಹಗರಣಗಳು ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತದೆ ಎಂದು ಸಲಹಾಸೂಚಿಯಲ್ಲಿ ತಿಳಿಸಲಾಗಿದೆ.
ಡಿಜಿಟಲ್ ಅರೆಸ್ಟ್ ವಂಚಕರು ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ವಿಯೆಟ್ನಾಮ್‌ಗಳಿಂದ ಕಾರ್ಯಾಚರಿಸುತ್ತಿದ್ದಾರೆ ಎನ್ನುವುದನ್ನು ಅವರ ಐಪಿಡಿಆರ್(ಇಂಟರರ್ನೆಟ್ ಪ್ರೋಟೊಕಾಲ್ ಡಿಟೇಲ್ ರೆಕಾರ್ಡ್)ಗಳು ಬಹಿರಂಗಗೊಳಿಸಿವೆ. ಇಂತಹ ವಂಚನೆಗಳಿಂದ ಸಂಗ್ರಹಿಸಿದ ಹಣವನ್ನು ಬಳಿಕ ದುಬೈ ಮತ್ತು ವಿಯೆಟ್ನಾಮ್‌ನಲ್ಲಿಯ ಎಟಿಎಮ್‌ಗಳ ಮೂಲಕ ಹಿಂಪಡೆಯಲಾಗುತ್ತದೆ.
ಕಾಂಬೋಡಿಯಾ,ಮ್ಯಾನ್ಮಾರ್ ಮತ್ತು ವಿಯೆಟ್ನಾಮ್‌ಗಳಲ್ಲಿ ಕುಳಿತಿರುವ ಸೈಬರ್ ಕ್ರಿಮಿನಲ್‌ಗಳು ತಮ್ಮ ಏಜೆಂಟ್‌ರಿಗೆ ಭಾರತೀಯ ಸಿಮ್ ಕಾರ್ಡ್‌ಗಳಿಗೆ ಆರ್ಡರ್ ಮಾಡುತ್ತಾರೆ. ಕಾಂಬೋಡಿಯಾ ಮತ್ತು ಮ್ಯಾನ್ಮಾರ್‌ಗಳಿಗೆ ಸುಮಾರು 45,000 ಸಿಮ್ ಕಾರ್ಡ್‌ಗಳನ್ನು ರವಾನಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಿಮ್‌ಕಾರ್ಡ್‌ಗಳನ್ನು ನಂತರ ಭಾರತೀಯ ಏಜೆನ್ಸಿಗಳು ನಿಷ್ಕ್ರಿಯಗೊಳಿಸಿದ್ದವು.
ಮಾರ್ಚ್‌ನಲ್ಲಿ ಉತ್ತರಾಖಂಡ್ ವಿಶೇಷ ಕಾರ್ಯಪಡೆಯು ಸುಮಾರು 3000 M2M ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿತ್ತು, ಇವುಗಳನ್ನು ಮಷಿನ್-ಟು-ಮಷಿನ್ ಸಂವಹನಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು.
ವಂಚಕರು ಡಿಜಿಟಲ್ ಅರೆಸ್ಟ್‌ಗಳ ಮೂಲಕ ಪ್ರತಿದಿನ ಸುಮಾರು ಆರು ಕೋ.ರೂ.ಗಳನ್ನು ಕೊಳ್ಳೆ ಹೊಡೆಯುತ್ತಿದ್ದಾರೆ,ಈ ವರ್ಷದ ಮೊದಲ ಹತ್ತು ತಿಂಗಳುಗಳಲ್ಲಿ ವಂಚಕರು 2,140 ಕೋಟಿ ರೂ.ಗಳನ್ನು ಲಪಟಾಯಿಸಿದ್ದಾರೆ ಎಂದು ಗೃಹಸಚಿವಾಲಯದ ಸೈಬರ್ ಘಟಕದಲ್ಲಿನ ಮೂಲಗಳು ತಿಳಿಸಿವೆ.
ವಂಚಕರು ಹೆಚ್ಚಾಗಿ ಕಾಂಬೋಡಿಯಾದಲ್ಲಿನ ಚೈನೀಸ್ ಕ್ಯಾಸಿನೊಗಳಲ್ಲಿಯ ಕಾಲ್ ಸೆಂಟರ್‌ಗಳಿಂದ ಕಾರ್ಯಾಚರಿಸುತ್ತಿದ್ದಾರೆ ಎನ್ನುವುದನ್ನು ಗೃಹಸಚಿವಾಲಯವು ಕಂಡು ಹಿಡಿದಿದೆ. ಅಕ್ಟೋಬರ್‌ವರೆಗೆ ಡಿಜಿಟಲ್ ಅರೆಸ್ಟ್ ಬಂಧನಗಳಿಗೆ ಸಂಬಂಧಿಸಿದ 92,334 ಪ್ರಕರಣಗಳನ್ನು ಸೈಬರ್ ಘಟಕವು ವರದಿ ಮಾಡಿದೆ.