ತಿರುವನಂತಪುರ: ಕೇರಳದ ಎರ್ನಾಕುಳಂ ಜಿಲ್ಲೆಯ ಮುನಂಬಮ್‌ನಲ್ಲಿ ವಕ್ಫ್ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಥೋಲಿಕ್ ಚರ್ಚ್‌ನ ಬೆಂಬಲದೊಂದಿಗೆ ಸ್ಥಳೀಯ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಯಾರೊಬ್ಬರನ್ನೂ ಸ್ಥಳಾಂತರಿಸಬಾರದು ಎಂದು ಸಿಪಿಐ ಆಗ್ರಹಿಸಿದೆ.
ಮುನಂಬಮ್ ಗ್ರಾಮಗಳಲ್ಲಿ ತಲೆಮಾರುಗಳಿಂದ ಕ್ರಿಶ್ಚಿಯನ್ ಕುಟುಂಬಗಳಿಗೆ ಸೇರಿದ ಹಲವು ಆಸ್ತಿಗಳನ್ನು ವಕ್ಫ್ ಮಂಡಳಿ ಕಾನೂನುಬಾಹಿರವಾಗಿ ಹಕ್ಕು ಸಾಧಿಸುತ್ತಿದೆ ಎಂದು ಚರ್ಚ್ ಆರೋಪ ಮಾಡಿದೆ.
'ನೋಂದಾಯಿತ ಪತ್ರಗಳು, ಭೂ ತೆರಿಗೆ ಪಾಪತಿ ರಸೀದಿಗಳು ಇದ್ದ ಹೊರತಾಗಿಯೂ ವಕ್ಫ್ ಮಂಡಳಿಯು ನಮ್ಮ ಭೂಮಿ ಮತ್ತು ಆಸ್ತಿಗಳ ಮೇಲೆ ಕಾನೂನುಬಾಹಿರವಾಗಿ ಹಕ್ಕು ಪ್ರತಿಪಾದಿಸುತ್ತಿದೆ' ಎಂದು ಎರ್ನಾಕುಳಂ ಜಿಲ್ಲೆಯ ಚೆರಾಯಿ ಮತ್ತು ಮುನಂಬಮ್ ಗ್ರಾಮಗಳ ನಿವಾಸಿಗಳು ದೂರಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳ ಪ್ರಕಾರ, 1950ರಲ್ಲಿ ಅವರ ಜಮೀನನ್ನು ಕೋಯಿಕೋಡ್‌ನ ಫಾರೂಕ್ ಕಾಲೇಜಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಲಾಗಿತ್ತು. ಇದು ವಕ್ಫ್ ಭೂಮಿಯಲ್ಲ. ಅದಾಗ್ಯೂ ಈ ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ಕರ್ನಾಟಕದಂತೆ ಕೇರಳದಲ್ಲೂ ವಕ್ಫ್ ಭೂ ವಿವಾದ ರಾಜಕೀಯ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದು, ವಿವಿಧ ಪಕ್ಷಗಳು ಪ್ರತಿಕ್ರಿಯಿಸಿವೆ.
ಸಿಪಿಐ ಎಚ್ಚರಿಕೆ:
ಆಡಳಿತಾರೂಢ ಎಲ್‌ಡಿಎಫ್‌ನ ಎರಡನೇ ಅತಿದೊಡ್ಡ ಪಾಲುದಾರ ಪಕ್ಷವಾದ ಸಿಪಿಐ, ಸಮಾಜದಲ್ಲಿ ಕೋಮು ವಿಭಜನೆ ಸೃಷ್ಟಿಸಲು ಪಟ್ಟಭದ್ರ ಹಿತಾಸಕ್ತಿಗಳು ಯತ್ನಿಸುತ್ತಿವೆ ಎಂದು ಎಚ್ಚರಿಕೆ ನೀಡಿದೆ.
'ಮುನಂಬಮ್‌ನಿಂದ ಯಾರನ್ನೂ ಒಕ್ಕಲೆಬ್ಬಿಸಬಾರದು ಎಂಬುದು ಪಕ್ಷದ ನಿಲುವಾಗಿದೆ. ವಕ್ಫ್ ಭೂಮಿಯೇ ಆಗಲಿ, ದೇವಸ್ವಂ ಭೂಮಿಯೇ ಆಗಲಿ ಬಡವರನ್ನು ಸ್ಥಳಾಂತರಿಸಬಾರದು' ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ 'ಫೇಸ್‌ಬುಕ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುನಂಬಮ್ ವಿಷಯದಲ್ಲಿ ಕೆಲವರು ಕೋಮುವಾದ ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಆರ್‌ಎಸ್‌ಎಸ್, ಎಸ್‌ಡಿಪಿಐ ಕ್ರಮವಾಗಿ ಹಿಂದೂ ಮತ್ತು ಮುಸ್ಲಿಂ ಮತಾಂಧತೆಯ ಬೀಜಗಳನ್ನು ಬಿತ್ತುತ್ತಿವೆ ಎಂದು ಅವರು ಪೋಸ್ಟ್‌ನಲ್ಲಿ ದೂರಿದ್ದಾರೆ.
ಕೇಂದ್ರ ಸರ್ಕಾರ ಪರಿಚಯಿಸಿರುವ ವಕ್ಫ್ (ತಿದ್ದುಪಡಿ) ಮಸೂದೆ-2024 ಅನ್ನು ವಿರೋಧಿಸಿ ಎಲ್‌ಡಿಎಫ್ ಮತ್ತು ಯುಡಿಎಫ್ ರಂಗಗಳು ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದ್ದವು.
ವಿರೋಧ ಪಕ್ಷವಾದ ಕಾಂಗ್ರೆಸ್‌ನ ನಾಯಕ ವಿ.ಡಿ.ಸತೀಶನ್, 'ಮುನಂಬಮ್‌ನಲ್ಲಿರುವ ವಿವಾದಿತ ಭೂಮಿಯು ವಕ್ಫ್ ಮಂಡಳಿಗೆ ಸೇರಿದ್ದಲ್ಲ ಎಂಬುದು ನಮ್ಮ ಪಕ್ಷದ ನಿಲುವಾಗಿದೆ. ಸರ್ಕಾರ ಬಯಸಿದರೆ ಈ ಸಮಸ್ಯೆಯನ್ನು 10 ನಿಮಿಷಗಳಲ್ಲಿ ಪರಿಹರಿಸಬಹುದು' ಎಂದು ಹೇಳಿದ್ದರು.