ನವದೆಹಲಿ: ಕಾನೂನುಬದ್ಧ ಸಾಕ್ಷ್ಯಗಳು ಲಭ್ಯವಿದ್ದರೆ ಮಾತ್ರ ಆರೋಪಿಯನ್ನು ದೋಷಿ ಎಂದು ಪರಿಗಣಿಸಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಒಕಾ, ಅಹಸಾನುದ್ದೀನ್ ಅಮಾನುಲ್ಲಾ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರನ್ನು ಒಳಗೊಂಡ ನ್ಯಾಯಪೀಠವು, ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ರಣದೀಪ್ ಸಿಂಗ್ ಅಲಿಯಾಸ್ ರಾಣಾ ಮತ್ತು ಮತ್ತೊಬ್ಬ ಆರೋಪಿಯನ್ನು ಖಲಾಸೆಗೊಳಿಸಿತು.
ಈ ಮೂಲಕ ದೋಷಿಗಳು ಎಂಬ ತೀರ್ಪನ್ನು ಎತ್ತಿಹಿಡಿದಿದ್ದ ಪಂಜಾಬ್-ಹರಿಯಾಣ ಹೈಕೋರ್ಟ್ ತೀರ್ಪು ಮತ್ತು ಜೀವಾವಧಿ ಶಿಕ್ಷೆ ವಿಧಿಸಿದ್ದ ಅಂಬಾಲಾ ಕೋರ್ಟ್ ತೀರ್ಪನ್ನು ವಜಾಗೊಳಿಸಿತು.
ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು, 'ಇದೊಂದು ಭೀಕರ ಹತ್ಯೆ ಪ್ರಕರಣ' ಎಂದು ವಾದಿಸಿದರು.
ಆಗ ನ್ಯಾಯಪೀಠವು, 'ಹೌದು, ಇದೊಂದು ಭೀಕರ ಹತ್ಯೆ ಪ್ರಕರಣ. ಆದರೆ ಅಪರಾಧದ ಭೀಕರತೆಯನ್ನು ಸಾಬೀತುಪಡಿಸುವ, ಸಂಶಯಕ್ಕೆ ಆಸ್ಪದ ನೀಡದ ಸಾಕ್ಷ್ಯಗಳು ಲಭ್ಯವಿಲ್ಲ. ಈ ಪ್ರಕರಣದಲ್ಲಿ ಆರೋಪಿಗಳ ಪಾತ್ರವನ್ನು ಸಾಬೀತು ಮಾಡುವ ಕಾನೂನುಬದ್ಧ ಸಾಕ್ಷ್ಯಗಳೂ ಇಲ್ಲ. ನ್ಯಾಯಾಲಯವೊಂದು ನೈತಿಕತೆಯ ಆಧಾರದಲ್ಲಿ ಅಪರಾಧ ನಿರ್ಣಯ ಮಾಡಿ ಶಿಕ್ಷೆ ನೀಡಲು ಸಾಧ್ಯವಿಲ್ಲ' ಪ್ರತಿಪಾದಿಸಿತು.
ಘಟನಾ ಸ್ಥಳದಲ್ಲಿ ವಶಪಡಿಸಿಕೊಂಡ ಸಾಕ್ಷ್ಯಗಳ ಆಧಾರದಲ್ಲಿಯೂ ಅಪರಾಧ ನಿರ್ಣಯ ಮಾಡಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.
ಪ್ರತ್ಯಕ್ಷಸಾಕ್ಷಿ ಆಗಿರುವ ಕೊಲೆಯಾದ ವ್ಯಕ್ತಿಯ ಸಹೋದರಿಯ ಹೇಳಿಕೆಯಲ್ಲಿ ಹಲವು ಲೋಪದೋಷಗಳು ಇವೆ ಎಂದು ಕೋರ್ಟ್ ಹೇಳಿತು.
2013 ಜುಲೈ 8ರಂದು ಗುರುಪಾಲ್ ಸಿಂಗ್ ಅವರನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು. ಮರುದಿನ ಕಾಲುವೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಸಿಂಗ್ ಸಹೋದರಿ, 'ನನ್ನನ್ನು ಭೇಟಿಯಾಗಲು ಬರುವ ಸಂದರ್ಭದಲ್ಲಿ ಆರೋಪಿಗಳು ಕಾರಿನಲ್ಲಿ ಅಪಹರಿಸಿದ್ದಾರೆ' ಎಂದು ದೂರಿದ್ದರು.