ನವದೆಹಲಿ: ರೈಲು ತಲುಪುವುದು ವಿಳಂಬವಾಗುವ ಕಾರಣ ಮುಹೂರ್ತಕ್ಕೆ ಸರಿಯಾಗಿ ಮಂಟಪಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆತಂಕದಲ್ಲಿದ್ದ ಮುಂಬೈನ ವರ ಮತ್ತು ಅವರ ಕುಟುಂಬದ ಸದಸ್ಯರನ್ನು ಸರಿಯಾದ ಸಮಯಕ್ಕೆ ತಲುಪಿಸಿ ರೈಲ್ವೆ ಇಲಾಖೆಯು ಪ್ರಶಂಸೆಗೆ ಪಾತ್ರವಾಗಿದೆ.
ಗುವಾಹಟಿಯಲ್ಲಿ ಮದುವೆ ನಿಗದಿಯಾಗಿತ್ತು. ವರ ಮತ್ತು ಅವರ ಕುಟುಂಬಸ್ಥರಿದ್ದ ರೈಲು ಮುಂಬೈನಿಂದ ಪಶ್ಚಿಮ ಬಂಗಾಳದ ಸಾಂತರಗಾಛಿ ನಿಲ್ದಾಣಕ್ಕೆ ನಾಲ್ಕು ತಾಸು ತಡವಾಗಿ ಬಂದಿತ್ತು. ಇದರಿಂದ ಆತಂಕಗೊಂಡ ಮುಂಬೈ ಮೂಲದ ವರ ಚಂದ್ರಶೇಖರ್ ವಾಘ ಅವರು ನೆರವು ನೀಡುವಂತೆ 'ಎಕ್ಸ್'ನಲ್ಲಿ ಮನವಿ ಮಾಡಿದ್ದರು. ರೈಲ್ವೆ ಇಲಾಖೆಯು ಕೂಡಲೇ ಸ್ಪಂದಿಸಿ ಸಮರೋಪಾದಿಯಲ್ಲಿ ಅಗತ್ಯ ವ್ಯವಸ್ಥೆ ಮಾಡಿ ಸಮಯಕ್ಕೆ ಸರಿಯಾಗಿ ಗಮ್ಯಸ್ಥಾನ ತಲುಪುವಂತೆ ಮಾಡಿದೆ. ಈ ಮೂಲಕ ವಿವಾಹ ಕಾರ್ಯಕ್ರಮಕ್ಕೆ ಉಂಟಾಗಲಿದ್ದ ಅಡಚಣೆಯನ್ನು ತಪ್ಪಿಸಿದೆ.
ನಡೆದಿದ್ದೇನು?
ಚಂದ್ರಶೇಖರ್ ವಾಘ ಮತ್ತು ಅವರ ಕುಟುಂಬದ 34 ಮಂದಿ ನವೆಂಬರ್ 14ರಂದು ಮುಂಬೈನ ಕಲ್ಯಾಣ ರೈಲು ನಿಲ್ದಾಣದಿಂದ ಬೆಳಿಗ್ಗೆ 6.55ಕ್ಕೆ ಗೀತಾಂಜಲಿ ಎಕ್ಸ್‌ಪ್ರೆಸ್ ರೈಲು ಹತ್ತಿದ್ದರು. ರೈಲು ನ.15ರ ಮಧ್ಯಾಹ್ನ 1.05ಕ್ಕೆ ಪಶ್ಚಿಮ ಬಂಗಾಳದ ಹೌರಾ ಜಂಕ್ಷನ್ ತಲುಪಬೇಕಿತ್ತು. ಅಲ್ಲಿಂದ ಸಂಜೆ 4.05ಕ್ಕೆ ಇರುವ ಸರೈಘಾಟ್ ಎಕ್ಸ್‌ಪ್ರೆಸ್ ರೈಲು ಹತ್ತಿ ಗುವಾಹಟಿ ತಲುಪುವ ಯೋಜನೆಯನ್ನು ಅವರು ಹಾಕಿಕೊಂಡಿದ್ದರು.
ಆದರೆ, ಗೀತಾಂಜಲಿ ಎಕ್ಸ್‌ಪ್ರೆಸ್ ರೈಲು ಹೌರಾ ನಿಲ್ದಾಣದಿಂದ 15 ಕಿ.ಮೀ ದೂರದಲ್ಲಿರುವ ಸಾಂತರಗಾಛಿ ರೈಲು ನಿಲ್ದಾಣಕ್ಕೆ ನಿಗದಿತ ಸಮಯಕ್ಕಿಂತ ನಾಲ್ಕು ತಾಸು ತಡವಾಗಿ ಬಂದಿತ್ತು. ಈ ಸಂದರ್ಭದಲ್ಲಿ ಚಂದ್ರಶೇಖರ್ ಅವರು 'ಎಕ್ಸ್'ನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಪರಿಸ್ಥಿತಿ ವಿವರಿಸಿ ನೆರವು ನೀಡುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಪೂರ್ವ ರೈಲ್ವೆ ಅಧಿಕಾರಿಗಳು ಸಮರೋಪಾದಿಯಲ್ಲಿ ನೆರವಿಗೆ ನಿಂತರು. ಗೀತಾಂಜಲಿ ಎಕ್ಸ್‌ಪ್ರೆಸ್ ರೈಲು ಬರುವವರೆಗೂ ಸರೈಘಾಟ್ ಎಕ್ಸ್‌ಪ್ರೆಸ್ ರೈಲನ್ನು ಹೌರಾ ಜಂಕ್ಷನ್‌ನಲ್ಲಿಯೇ ನಿಲ್ಲಿಸಿದರು. ಲೋಕೊ ಪೈಲಟ್ ಗೀತಾಂಜಲಿ ರೈಲಿನ ವೇಗವನ್ನು ಹೆಚ್ಚಿಸಿದರು.
ಇದರಿಂದಾಗಿ ರೈಲು ಸಂಜೆ 4.08 ನಿಮಿಷಕ್ಕೆ ಹೌರಾ ನಿಲ್ದಾಣ ತಲುಪಿತು. ಈ ರೈಲು ಬರುವಿಕೆಗಾಗಿಯೇ ಕಾದಿದ್ದ ರೈಲ್ವೆ ಸಿಬ್ಬಂದಿ ತಕ್ಷಣವೇ ವರನ ಕುಟುಂಬ ಮತ್ತು ಅವರ ಬ್ಯಾಗುಗಳನ್ನು ಮತ್ತೊಂದು ಪ್ಲಾಟ್‌ಫಾರ್ಮ್‌ನತ್ತ ಸಾಗಿಸಲು ನೆರವಾದರು.
ಸಮಯಕ್ಕೆ ಸರಿಯಾಗಿ ತಲುಪಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದ ರೈಲ್ವೆ ಸಚಿವರು ಮತ್ತು ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಚಂದ್ರಶೇಖರ್ ತಿಳಿಸಿದ್ದಾರೆ.