ನವದೆಹಲಿ: ಕೆನಡಾ ಸರ್ಕಾರವು ಸೈಬರ್ ಬೆದರಿಕೆಯೊಡ್ಡುವ ವಿರೋಧಿ ರಾಷ್ಟ್ರಗಳ ಪಟ್ಟಿಗೆ ತನ್ನನ್ನು ಸೇರಿಸಿರುವುದಕ್ಕೆ ಭಾರತ ಕಿಡಿಕಾರಿದೆ. ಇದು, ಭಾರತದ ಮೇಲೆ ದಾಳಿ ಮಾಡುವ ಕೆನಡಾದ ತಂತ್ರಕ್ಕೆ ಮತ್ತೊಂದು ಉದಾಹರಣೆ ಎಂದು ತಿರುಗೇಟು ನೀಡಿದೆ.
ಕೆನಡಾದಲ್ಲಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಎದುರಾಗುವ ಸೈಬರ್ ಬೆದರಿಕೆಗಳನ್ನು ದೃಢಪಡಿಸುವ 'ರಾಷ್ಟ್ರೀಯ ಸೈಬರ್ ಬೆದರಿಕೆ ಮೌಲ್ಯಮಾಪನ (ಎನ್‌ಸಿಟಿಎ) 2024-2025' ವರದಿ ಅಕ್ಟೋಬರ್ 30 ರಂದು ಬಿಡುಗಡೆಯಾಗಿದೆ.
'ವಿರೋಧಿ ರಾಷ್ಟ್ರಗಳಿಂದ ಸೈಬರ್ ಬೆದರಿಕೆ' ಎಂಬ ಈ ವರದಿಯಲ್ಲಿ, 'ಬೇಹುಗಾರಿಕೆ ಉದ್ದೇಶದಿಂದ ಭಾರತ ಪ್ರಾಯೋಜಿತ ವ್ಯಕ್ತಿಗಳು ಕೆನಡಾ ಸರ್ಕಾರದ ನೆಟ್‌ವರ್ಕ್‌ಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇದೆ' ಎಂದು ಅಂದಾಜಿಸಿರುವುದಾಗಿ ಉಲ್ಲೇಖಿಸಲಾಗಿದೆ. ಚೀನಾವನ್ನು ಅತಿಹೆಚ್ಚು ಬೆದರಿಕೆಯೊಡ್ಡುವ ದೇಶ ಎಂದು ಹಾಗೂ ನಂತರದ ಸ್ಥಾನಗಳಲ್ಲಿ ರಷ್ಯಾ, ಇರಾನ್, ಉತ್ತರ ಕೊರಿಯಾ ಹಾಗೂ ಭಾರತವನ್ನು ಹೆಸರಿಸಲಾಗಿದೆ.
ಇದೇ ಮೊದಲ ಬಾರಿಗೆ ಭಾರತವನ್ನು ಈ ಪಟ್ಟಿಗೆ ಸೇರಿಸಲಾಗಿದೆ. 2018, 2020 ಮತ್ತು 2023-24ರಲ್ಲಿ ಪ್ರಕಟವಾಗಿದ್ದ ವರದಿಗಳಲ್ಲಿ ಹೆಸರಿಸಿರಲಿಲ್ಲ.
ಈ ಕುರಿತು ಪ್ರತ್ರಿಕಿಯಿಸಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು, 'ಯಾವುದೇ ಆಧಾರಗಳಿಲ್ಲದೆ, ಇಂತಹ ಆರೋಪಗಳನ್ನು ಮಾಡಲಾಗಿದೆ' ಎಂದು ದೂರಿದ್ದಾರೆ.
'ಸೈಬರ್ ಬೆದರಿಕೆ ಆಧಾರದಲ್ಲಿ ಭಾರತವನ್ನು ಪಟ್ಟಿಗೆ ಸೇರಿಸಿರುವುದು, ಭಾರತದ ವಿರುದ್ಧ ದಾಳಿ ಮಾಡುವ ಕೆನಡಾದ ತಂತ್ರಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇದರೊಂದಿಗೆ, ಭಾರತದ ವಿರುದ್ಧ ಜಾಗತಿಕ ಅಭಿಪ್ರಾಯವನ್ನು ನಿಪುಣ ರೀತಿಯಲ್ಲಿ ನಿರ್ವಹಿಸುತ್ತಿರುವುದನ್ನು ಕೆನಡಾದ ಉನ್ನತಾಧಿಕಾರಿಗಳು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ' ಎಂದು ಜೈಸ್ವಾಲ್ ಪ್ರತಿಪಾದಿಸಿದ್ದಾರೆ.
'ಮೊದಲು ಅಸಂಬದ್ಧ, ಆಧಾರರಹಿತ ಹೇಳಿಕೆಗಳನ್ನು ನೀಡಿ, ನಂತರ ಆರೋಪಗಳನ್ನು ನಮ್ಮ ಮೇಲೆ ಹೊರಿಸುತ್ತೀರಿ. ಇದು ಸರಿಯಲ್ಲ' ಎಂದು ಕಟುವಾಗಿ ಹೇಳಿದ್ದಾರೆ.