ನವದೆಹಲಿ: ಕಾರ್ಯಾಂಗದ ಅಧಿಕಾರಿಗಳು ನ್ಯಾಯಾಧೀಶರಾಗಲು ಅವಕಾಶ ಇಲ್ಲ, ಆರೋಪಿಯೊಬ್ಬ ಅಪರಾಧಿ ಎಂದು ತೀರ್ಮಾನಿಸಿ, ಆತನ ಆಸ್ತಿಯನ್ನು ಧ್ವಂಸಗೊಳಿಸುವ ಮೂಲಕ ಶಿಕ್ಷೆ ವಿಧಿಸಲು ಅವರಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನವದೆಹಲಿ: ಕಾರ್ಯಾಂಗದ ಅಧಿಕಾರಿಗಳು ನ್ಯಾಯಾಧೀಶರಾಗಲು ಅವಕಾಶ ಇಲ್ಲ, ಆರೋಪಿಯೊಬ್ಬ ಅಪರಾಧಿ ಎಂದು ತೀರ್ಮಾನಿಸಿ, ಆತನ ಆಸ್ತಿಯನ್ನು ಧ್ವಂಸಗೊಳಿಸುವ ಮೂಲಕ ಶಿಕ್ಷೆ ವಿಧಿಸಲು ಅವರಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ರೀತಿ ಮಾಡುವುದು ಅಧಿಕಾರದ ವ್ಯಾಪ್ತಿಯನ್ನು ಮೀರುವುದಕ್ಕೆ ಸಮ ಎಂದು ಅದು ಹೇಳಿದೆ.
'ಕಾರ್ಯಾಂಗದ ಅಧಿಕಾರಿಗಳು ನ್ಯಾಯಾಧೀಶರಂತೆ ವರ್ತಿಸಿದರೆ, ಅಧಿಕಾರದ ಮಿತಿಗಳನ್ನು ಹೇಳುವ ತತ್ತ್ವಕ್ಕೆ ವಿರುದ್ಧವಾಗಿ ನಡೆದಂತಾಗುತ್ತದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರಿಗಳನ್ನು ಉತ್ತರದಾಯಿ ಆಗಿಸಬೇಕು ಎಂಬುದು ನಮ್ಮ ಅಭಿಪ್ರಾಯ' ಎಂದು ಪೀಠವು ಸ್ಪಷ್ಟಪಡಿಸಿದೆ.
ಅತ್ಯಂತ ಹೇಯವಾದ ಅಪರಾಧವನ್ನು ಎಸಗಿದ ವ್ಯಕ್ತಿ ಅಪರಾಧಿ ಎಂದು ಘೋಷಿಸಿದಾಗಲೂ, ಕಾನೂನಿನ ಅಡಿಯಲ್ಲಿ ಇರುವ ಕಡ್ಡಾಯ ಪ್ರಕ್ರಿಯೆಗಳನ್ನು ಪಾಲನೆ ಮಾಡದೆ ಶಿಕ್ಷೆ ವಿಧಿಸಲು ಅವಕಾಶ ಇಲ್ಲ. ಹೀಗಿರುವಾಗ, ಯಾವುದೋ ಒಂದು ಅಪರಾಧ ಎಸಗಿದ ಆರೋಪವನ್ನು ಮಾತ್ರ ಹೊತ್ತಿರುವ ವ್ಯಕ್ತಿಯು ಅಥವಾ ಆ ಅಪರಾಧ ಎಸಗಿರುವ ವ್ಯಕ್ತಿಯು ತನ್ನ ಆಸ್ತಿಯ ಧ್ವಂಸದ ಶಿಕ್ಷೆಗೆ ಗುರಿಯಾಗಬಹುದೇ? ಇದಕ್ಕೆ ಉತ್ತರ 'ಇಲ್ಲ' ಎಂದು ಪೀಠವು ಖಚಿತ ದನಿಯಲ್ಲಿ ಹೇಳಿದೆ.
ಆರೋಪಿಯು ಅಪರಾಧಿ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೂ ಆತ ನಿರ್ದೋಷಿ ಎಂಬ ತತ್ತ್ವವು ಯಾವುದೇ ಕಾನೂನು ವ್ಯವಸ್ಥೆಯ ಪಾಲಿಗೆ ಅಡಿಗಲ್ಲು ಇದ್ದಂತೆ ಎಂಬುದನ್ನು ನ್ಯಾಯಪೀಠವು ನೆನಪಿಸಿಕೊಟ್ಟಿದೆ. ವ್ಯಕ್ತಿಗೆ ಅನ್ಯಾಯವಾಗಿ ಶಿಕ್ಷೆ ಆಗದಂತೆ ಈ ತತ್ತ್ವವು ಖಾತರಿಪಡಿಸುತ್ತದೆ ಎಂದು ಹೇಳಿದೆ.