ಕಾಸರಗೋಡು: ಆರ್ಥಿಕವಾಗಿ ದುರ್ಬಲರಾಗಿರುವ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಜತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಿಕೊಡುವ ಯೋಜನೆಯನ್ನು ಕಣ್ಣೂರು ಕಿಮ್ಸ್ ಶ್ರೀಚಂದ್ ಆಸ್ಪತ್ರೆ ಹೊಸ ಯೋಜನೆ ಜಾರಿಗೆ ತಂದಿದೆ. ಆಸ್ಪತ್ರೆಯ ವಿವಿಧ ವಿಭಾಗಗಳ ಸಹಕಾರದೊಂದಿಗೆ ಇದನ್ನು ಜಾರಿಗೊಳಿಸಲಾಗಿದ್ದು, ಕಾರ್ಡಿಯಾಲಜಿ, ಕಾರ್ಡಿಯೋ-ಥೊರಾಸಿಕ್ ಸರ್ಜರಿ, ನೆಫ್ರಾಲಜಿ, ಗ್ಯಾಸ್ಟ್ರೋಎಂಟರಾಲಜಿ, ಆರ್ಥೋಪೆಡಿಕ್ಸ್, ನ್ಯೂರಾಲಜಿ, ಅರಿವಳಿಕೆ, ರೋಗಶಾಸ್ತ್ರ, ಮೈಕ್ರೋಬಯಾಲಜಿ, ರೇಡಿಯಾಲಜಿ ಇತ್ಯಾದಿ ಯೋಜನೆಯಲ್ಲಿ ಒಳಗೊಂಡಿದೆ. ಈ ಯೋಜನೆಯ ಯಶಸ್ಸಿಗೆ ವೈದ್ಯರು, ನಸಿರ್ಂಗ್ ಸಿಬ್ಬಂದಿ ಮತ್ತು ಅರೆವೈದ್ಯಕೀಯ ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡುತ್ತಿರುವುದಾಗಿ ಆಸ್ಪತ್ರೆ ಯೂನಿಟ್ ಹೆಡ್ ಡಾ. ದಿಲ್ಶಾದ್ ಟಿಪಿ ಸುದ್ದಿಗೋಷೀಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ನಿರ್ದೇಶಕ ಮತ್ತು ಮುಖ್ಯ ಹೃದ್ರೋಗ ತಜ್ಞ ಡಾ. ರವೀಂದ್ರನ್ ನೇತೃತ್ವದಲ್ಲಿ ಯೋಜನೆ ಜಾರಿಯಾಗಲಿದೆ. ಖಾಸಗಿ ಆಸ್ಪತ್ರೆ ವಲಯದಲ್ಲಿ ಕೇರಳದಲ್ಲಿ ಇದೇ ಮೊದಲಬಾರಿಗೆ ಇಂತಹ ಮಾದರಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಉಚಿತ ಓಪಿಡಿ ಸೇವೆ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಆರ್ಥಿಕವಾಗಿ ಹಿಂದುಳಿದ ಜನರಿಗೆ ಶಸ್ತ್ರಚಿಕಿತ್ಸೆಯ ಮೇಲೆ ವಿಶೇಷ ರಿಯಾಯಿತಿಗಳಿರುವುದಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೆಫ್ರಾಲಜಿ ಮತ್ತು ಮೂತ್ರಪಿಂಡ ಕಸಿ ವೈದ್ಯ ಹಾಗೂ ಆಸ್ಪತ್ರೆ ಸಹಾಯಕ ವೈದ್ಯಕೀಯ ನಿರ್ದೇಶಕ ಡಾ. ಟಾಮ್ ಜೋಸ್ ಕಕ್ಕಾನಾಡ್, ಉಪ ವೈದ್ಯಕೀಯ ನಿರ್ದೇಶಕ ಡಾ. ಮಹೇಶ್ ಭಟ್ ಉಪಸ್ಥಿತರಿದ್ದರು.