ಮುಂಬೈ: ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಷೇರು ಕುಸಿತ ಹಾಗೂ ವಿದೇಶಿ ಬಂಡವಾಳ (ಎಫ್ಐಐ) ನಿರಂತರವಾಗಿ ವಾಪಸ್ ಹರಿದು ಹೋಗುತ್ತಿರುವ ಪರಿಣಾಮವಾಗಿ ಸತತ ಎರಡನೇ ದಿನವಾದ ಗುರುವಾರವೂ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಇಳಿಕೆ ದಾಖಲಾಗಿ ಹೂಡಿಕೆದಾರರು ನಷ್ಟ ಅನುಭವಿಸಿದರು.
ಎನ್ಎಸ್ಇ ನಿಫ್ಟಿ 135.50 ಅಂಶ ಅಥವಾ ಶೇಕಡ 0.56ರಷ್ಟು ಕುಸಿದು 24,205.35ರಲ್ಲಿ ನಿಂತಿತು. ಸೆನ್ಸೆಕ್ಸ್ ವಿಭಾಗದಲ್ಲಿ ಟೆಕ್ ಮಹೀಂದ್ರಾ, ಎಚ್ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ಏಷ್ಯನ್ ಪೇಂಟ್ಸ್, ಇನ್ಪೋಸಿಸ್, ಮಾರುತಿ ಸುಝುುಕಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಗಳಾಗಿವೆ. ಅದಕ್ಕೆ ವ್ಯತಿರಿಕ್ತವಾಗಿ, ಲಾರ್ಸನ್ ಆಂಡ್ ಟೂಬ್ರೋ ಷೇರುಗಳು ಶೇ. 6ಕ್ಕಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದವು. 2024ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತೆರಿಗೆ ಪಾವತಿ ನಂತರವೂ ಮೂಲಸೌಕರ್ಯ ದಿಗ್ಗಜ ಕಂಪನಿ ಲಾಭ ಶೇ. 5 ಏರಿಕೆ ಕಂಡು 3,395 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಮಹೀದ್ರಾ ಆಂಡ್ ಮಹೀಂದ್ರಾ, ಪವರ್ ಗ್ರಿಡ್, ಜೆಎಸ್ಡಬ್ಲುಯ ಸ್ಟೀಲ್, ಕೊಟಕ್ ಮಹೀಂದ್ರಾ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಸನ್ ಫಾರ್ವ ಕೂಡ ಲಾಭ ಗಳಿಸಿದ ಇತರ ಕಂಪನಿಗಳಾಗಿವೆ.
ಎಫ್ಐಐ ಮಾರಾಟ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಬುಧವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದು ಅವರು 4,613.65 ಕೋಟಿ ರೂಪಾಯಿ ಮೊತ್ತದ ಷೇರುಗಳನ್ನು ವಾಪಸ್ ಪಡೆದಿದ್ದರು.
ಸ್ಮಾಲ್ಕ್ಯಾಪ್ ಏರಿಕೆ: ಗುರುವಾರ ಬಿಎಸ್ಇ ಸ್ಮಾಲ್ಕ್ಯಾಪ್ ಸೂಚ್ಯಂಕ ಶೇಕಡ 1.62ರಷ್ಟು ಏರಿಕೆಯಾಗಿ ಮಿಡ್ಕ್ಯಾಪ್ ಶೇ. 0.34ರಷ್ಟು ಕುಸಿತ ದಾಖಲಿಸಿತು. ಕ್ಷೇತ್ರವಾರು ಸೂಚ್ಯಂಕಗಳಲ್ಲಿ ಬಿಎಸ್ಇ ಐಟಿ ಶೇ. 2.55, ಟೆಕ್ ಶೇ. 2.34, ಬೆಲೆಬಾಳುವ ಗ್ರಾಹಕ ಸಾಮಗ್ರಿಗಳು ಶೇ. 0.93 ಹಾಗೂ ಹಣಕಾಸು ಸೇವೆಗಳು ಶೇ. 0.49ರಷ್ಟು ಕುಸಿತ ಕಂಡವು. ಬಿಎಸ್ಇ ಹೆಲ್ತ್ಕೇರ್, ಕೈಗಾರಿಕಾ ಸರಕುಗಳು, ಕ್ಯಾಪಿಟಲ್ ಸರಕುಗಳು ಮತ್ತಿತರ ವಲಯಗಳು ಲಾಭ ಗಳಿಸಿದವು.
ಚಿನ್ನದ ಬೆಲೆ ಸ್ಥಿರ, ಬೆಳ್ಳಿ ಧಾರಣೆ ಕುಸಿತ: ರಾಷ್ಟ್ರ ರಾಜಧಾನಿಯ ಚಿನಿವಾರ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಧಾರಣೆಯಲ್ಲಿ ಹೆಚ್ಚಿನ ಏರಿಳಿತವಾಗದೆ 10 ಗ್ರಾಂ ಬಂಗಾರ 82,400 ರೂಪಾಯಿಗೆ ಮಾರಾಟವಾಯಿತು ಎಂದು ಅಖಿಲ ಭಾರತ ಸರಾಫರ ಸಂಘ ತಿಳಿಸಿದೆ. ಆದರೆ, ಬೆಳ್ಳಿ ಬೆಲೆ ಒಂದು ಕೆಜಿ ಮೇಲೆ 1,500 ರೂಪಾಯಿ ಕುಸಿತವಾಗಿದೆ. ಇದರಿಂದಾಗಿ ಒಂದು ಲಕ್ಷ ರೂಪಾಯಿ ಗಡಿಗಿಂತ ಕೆಳಗೆ ಕುಸಿದು ಒಂದು ಕೆಜಿ ಬೆಳ್ಳಿ ದರ 99,500 ರೂಪಾಯಿ ಆಗಿತ್ತು.
ಸ್ವಿಗ್ಗಿ ಐಪಿಒ: ಆಹಾರ ಡೆಲಿವರಿ ದಿಗ್ಗಜ ಕಂಪನಿ ಸ್ವಿಗ್ಗಿ ಆರಂಭಿಕ ಷೇರು ಮಾರಾಟ (ಐಪಿಒ) ಪ್ರಕ್ರಿಯೆಯನ್ನು ನವೆಂಬರ್ 6ರ ಬುಧವಾರ ಆರಂಭಿಸ ಲಿದ್ದು 8ರಂದು ಶುಕ್ರವಾರ ಮುಕ್ತಾಯವಾಗಲಿದೆ.
ನವರಾತ್ರಿಯಲ್ಲಿ ವಾಹನ ಮಾರಾಟ ಹೆಚ್ಚಳ: ನವರಾತ್ರಿ ಸಮಯದಲ್ಲಿ ಭಾರತದಾದ್ಯಂತ ವಾಹನಗಳ ಮಾರಾಟ ಮಧ್ಯಮದಿಂದ ಅಧಿಕ ಒಂದಂಕಿ ಏರಿಕೆಯನ್ನು ಕಂಡಿದ್ದು ಗ್ರಾಮೀಣ ಭಾಗಗಳಲ್ಲಿ ವಾಹನ ಮಾರಾಟ ಪ್ರಮಾಣ ಸ್ಥಗಿತವಾಗಿತ್ತು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಒಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಗುರುವಾರ ತಿಳಿಸಿದೆ. ಅಕ್ಟೋಬರ್ ಕೊನೆ ವಾರದಲ್ಲಿ ಪ್ರಯಾಣಿಕ ವಾಹನಗಳ ಕುರಿತ ವಿಚಾರಣೆ ಮತ್ತು ಬುಕ್ಕಿಂಗ್ನಲ್ಲಿ ಸ್ವಲ್ಪ ಸುಧಾರಣೆಯಾಗಿದೆ ಎಂದು ವರದಿಯೊಂದರಲ್ಲಿ ಅದು ಹೇಳಿದೆ.