ಮುಳ್ಳೇರಿಯ: ಎಂಡೋಸಲ್ಫಾನ್ ನ್ನು ಅವೈಜ್ಞಾನಿಕವಾಗಿ ಹುಗಿದು ಹಾಕಲಾಗಿದೆ ಎಂದು ದೂರು ಕೇಳಿ ಬಂದ ಪ್ಲಾಂಟೇಶನ್ ಕಾರ್ಪೋರೇಷನ್‍ನ ಮಿಂಚಿಪದವು ಗೇರು ಬೀಜ ತೋಟದಿಂದ ಸಂಗ್ರಹಿಸಿದ ಮಣ್ಣಿನಲ್ಲೂ, ನೀರಿನಲ್ಲೂ ಎಂಡೋಸಲ್ಫಾನ್ ನ ಅಂಶ ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ಕೇಂದ್ರ ಮಲಿನೀಕರಣ ನಿಯಂತ್ರಣ ಬೋರ್ಡ್‍ನ ವರದಿಯಿದೆ. ಬೋರ್ಡ್‍ನ ಬೆಂಗಳೂರುನಲ್ಲಿರುವ ರೀಜನಲ್ ಡಯರೆಕ್ಟರೇಟ್ ಲ್ಯಾಬ್‍ನಲ್ಲಿ ನಡೆಸಿದ ಪರಿಶೀಲನೆಯಲ್ಲಿ ಈ ಫಲಿತಾಂಶ ಲಭ್ಯವಾಗಿದೆ.
ಈ ವರದಿಯನ್ನು ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್‍ಗೆ ಸಲ್ಲಿಸಲಾಗಿದೆ. ಮಿಂಚಿಪದವು ಪಿಸಿಕೆ ಕಚೇರಿ ಪರಿಸರದ ಬಾವಿ, ಇದರಿಂದ ಒಂದೂವರೆ ಕಿಲೋ ಮೀಟರ್ ದೂರದ ಇನ್ನೊಂದು ಬಾವಿ, ಈಶ್ವರಮಂಗಲ ಪಂಚಾಯತಿ ಕಚೇರಿಯ ಸಮೀಪದ ಬಾವಿಯ ನೀರನ್ನು ಪರಿಶೀಲಿಸಲಾಗಿದೆ. ವೀಡೋಸಲ್ಫಾನ್ ಕೀಟನಾಶಕವನ್ನು ಹುಗಿದು ಹಾಕಲಾಗಿದೆ ಎಂದ ಸ್ಥಳದ ಹಾಗೂ ಪಿಸಿಕೆ ಎಸ್ಟೇಟ್‍ನಲ್ಲಿ ಕೀಟನಾಶಕವನ್ನು ಮಿಶ್ರಣ ಮಾಡುತ್ತಿದ್ದ ಕಾಂಕ್ರೀಟ್ ಟ್ಯಾಂಕ್‍ನ ಮಣ್ಣು ಕೂಡಾ ಪರಿಶೀಲಿಸಲಾಗಿದೆ. ಇದರಲ್ಲಿ ಯಾವುದರಲ್ಲೂ ಎಂಡೋಸಲ್ಫಾನ್ ಅಂಶ ಪತ್ತೆಯಾಗಿಲ್ಲವೆಂದು ವರದಿಯಲ್ಲಿದೆ.
ಪ್ಲಾಂಟೇಶನ್ ಕಾರ್ಪೋರೇಶನ್‍ನ ಮಿಂಚಿಪದವು ತೋಟದಲ್ಲಿ ಎಂಡೋಸಲ್ಫಾನ್ ಅವೈಜ್ಞಾನಿಕವಾಗಿ ಹುಗಿದು ಹಾಕಲಾಗಿದೆ ಎಂದೂ ಅದು ಕೇರಳ-ಕರ್ನಾಟಕ ಗಡಿ ಪ್ರದೇಶಗಳಲ್ಲಿ
ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದೂ ಆರೋಪಿಸಿ ಉಡುಪಿಯ ಮಾನವಹಕ್ಕು ಆಯೋಗದ ಡಾ. ರವೀಂದ್ರನಾಥ್ ಶಾನುಭೋಗ್ ನೀಡಿದ ದೂರಿನಂತೆ ಸ್ಥಳ ಪರಿಶೀಲಿಸಿ ವರದಿ ನೀಡಲು ಎನ್‍ಜಿಟಿ ಚೆನ್ನೈ ಬೆಂಚ್ ಸಿಪಿಸಿಬಿಗೆ ಹೊಣೆ ನೀಡಿತ್ತು. ಇದರ ಆಧಾರದಲ್ಲಿ ದಕ್ಷಿಣ ವಲಯ ನಿರ್ದೇಶಕ ಡಾ.ಜಿ. ಚಂದ್ರಬಾಬುರ ನೇತೃತ್ವದಲ್ಲಿರುವ ತಂಡ ತಲುಪಿ ಮಣ್ಣು, ನೀರನ್ನು ಪರಿಶೀಲಿಸಲು ಸ್ಯಾಂಪಲ್ ಸಂಗ್ರಹಿಸಿತ್ತು.
ಎಂಡೋಸಲ್ಫಾನ್ ಮಣ್ಣಿನಡಿಯಲ್ಲಿ ಹೂತು ಹಾಕಲಾಗಿದೆ ಎಂದು ತಿಳಿಸಿದ ಸ್ಥಳದ ಮೇಲ್ಬಾಗದ ಮಣ್ಣನ್ನು ಪರಿಶೀಲಿಸಲಾಗಿದೆ. ಆದುದರಿಂದ ಹೂತು ಹಾಕಿದ್ದರೆ ಈ ತಪಾಸಣೆಯಿಂದ ಫಲವಿಲ್ಲವೆಂದು ನೂರು ಅಡಿ ಆಳದಿಂದ ಮಣ್ಣು ತೆಗೆದು ಪರಿಶೀಲಿಸಬೇಕೆಂದು ಪ್ರಾಥಮಿಕ ವರದಿಯಲ್ಲಿ ಸಿಪಿಸಿಬಿ ಸೂಚಿಸಿತ್ತು.
ಆದರೆ ಹೂತುಹಾಕಲಾಗಿಲ್ಲ, ಆಗತ್ಯವಿದ್ದರೆ ಪರಿಶೀಲಿಸಬಹುದೆಂದು ಪಿಸಿಕೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೇ ರೀತಿ ಹಲವು ವರ್ಷಗಳ ಹಿಂದೆ ನಡೆಸಿದ ಪರಿಶೀಲನೆಯಲ್ಲೂ ಎಂಡೋಸಲ್ಫಾನ್ ಅಂಶ ಪತ್ತೆ ಸಾಧ್ಯವಾಗಿರಲಿಲ್ಲ.
ಅಭಿಮತ: :
-ಈ ವರದಿ ನೀಡಿರುವ ಅಂಶಗಳಿಂದ ಬಹಳಷ್ಟು ಸಮಾಧಾನ ನೀಡಿದೆ. ಕೊನೆಗೂ ಪ್ರಕೃತಿ ಮಣ್ಣಿನಲ್ಲಿ ಸೇರಿದ್ದ ವಿಶಾಂಶವನ್ನು ಸ್ವತಃ ಇಂಗಿಸಿಕೊಂಡಿದ್ದು, ಮುಂದಿನ ತಲೆಮಾರಿಗಾದರೂ ಇದರಿಂದ ಕೇಡು ಸಂಭವಿಸುವುದು ತಪ್ಪಿದಂತಾಗಿದೆ.
ಎಂಡೋಸಲ್ಫಾನ್ ಅಂಶ ಮಣ್ಣನಾಳದಲಲಿ ಚದುರಿ ಕಾಠಿಣ್ಯತೆಯನ್ನು ಕಳಕೊಂಡಿದೆ ಎಂಬುದನ್ನು ಈ ವರದಿ ಸಾಬೀತುಪಡಿಸಿದೆ.
-ಡಾ.ವೈ.ಎಸ್.ಮೋಹನ ಕುಮಾರ್. ಪಡ್ರೆ
ಎಂಡೋಸಲ್ಫಾನ್ ಸಮಸ್ಯೆ ಕಂಡುಬಂದಾಗ ಮೊತ್ತಮೊದಲು ಜಗತ್ತಿನೆದುರು ತೆರೆದಿಟ್ಟು ಹೋರಾಟಕ್ಕೆ ಚಾಲನೆ ನೀಡಿದ್ದ ವೈದ್ಯರು.