ಬೋಪಾಲ್: 40 ವರ್ಷಗಳ ಹಿಂದೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಸೋರಿಕೆಯಾದ ವಿಷಕಾರಿ ಅನಿಲಗಳ ಪರಿಣಾಮವು ದುರಂತದಲ್ಲಿ ಬದುಕುಳಿದವರ ಮುಂದಿನ ಪೀಳಿಗೆಯಲ್ಲಿಯೂ ಕಂಡುಬಂದಿದೆ ಎಂದು ವಿಧಿವಿಜ್ಞಾನ ವಿಭಾಗದ ನಿವೃತ್ತ ವೈದ್ಯರೊಬ್ಬರು ಹೇಳಿದ್ದಾರೆ.
1984ರ ಡಿಸೆಂಬರ್ 2ರ ತಡರಾತ್ರಿ ಭೋಪಾಲ್ ಹೊರವಲಯದಲ್ಲಿರುವ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ಕಂಪನಿಯ ಕೀಟನಾಶಕ ಘಟಕದಲ್ಲಿ ಮೀಥೈಲ್ ಐಸೋಸೈನೇಟ್ ವಿಷಾನಿಲ ಸೋರಿಕೆಯಾಗಿತ್ತು. ಈ ದುರ್ಘಟನೆಯಲ್ಲಿ 15,000ಕ್ಕೂ ಅಧಿಕ ಜನರು ಮೃತಪಟ್ಟಿದ್ದರೆ, 5 ಲಕ್ಷಕ್ಕೂ ಹೆಚ್ಚು ಜನರು ಅಂಗವೈಕಲ್ಯ ಸೇರಿ ಹಲವು ದೈಹಿಕ ನ್ಯೂನತೆಗಳಿಗೆ ಗುರಿಯಾಗಿದ್ದರು.
ಅನಿಲ ದುರಂತದಲ್ಲಿ ಬದುಕುಳಿದವರ ಸಂಘಟನೆಗಳು ಶನಿವಾರ ಕಾರ್ಯಕ್ರಮ ಆಯೋಜಿಸಿದ್ದವು. ಇಲ್ಲಿ ಮಾತನಾಡಿದ ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥ ಡಾ.ಡಿ.ಕೆ.ಸತ್ಪತಿ ಅವರು, ದುರಂತದ ಮೊದಲ ದಿನ 875 ಮಂದಿಯ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗಿತ್ತು. ದುರಂತದಲ್ಲಿ ಬದುಕುಳಿದ ಮಹಿಳೆಯರಲ್ಲಿ ಜನಿಸುವ ಮಕ್ಕಳ ಮೇಲೆ ವಿಷಕಾರಿ ಅನಿಲಗಳ ಪರಿಣಾಮಗಳನ್ನು ಯೂನಿಯನ್ ಕಾರ್ಬೈಡ್ ನಿರಾಕರಿಸಿದೆ. ಆದರೆ ದುರಂತದಲ್ಲಿ ಮೃತಪಟ್ಟ ಗರ್ಭಿಣಿಯರ ರಕ್ತದ ಮಾದರಿಗಳನ್ನು ಪರಿಶೀಲಿಸಲಾಗಿದ್ದು, ತಾಯಿಯಲ್ಲಿ ಕಂಡುಬಂದ ಶೇ 50ರಷ್ಟು ವಿಷಕಾರಿ ಅಂಶಗಳು ಆಕೆಯ ಹೊಟ್ಟೆಯಲ್ಲಿರುವ ಮಗುವಿನಲ್ಲೂ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ದುರಂತದಲ್ಲಿ ಬದುಕುಳಿದ ಮಹಿಳೆಯರಿಗೆ ಜನಿಸಿದ ಮಕ್ಕಳು ವಿಷಕಾರಿ ಅಂಶಗಳನ್ನು ಹೊಂದಿದ್ದು, ಇದು ಮುಂದಿನ ಪೀಳಿಗೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಪರಿಣಾಮಗಳು ತಲೆಮಾರುಗಳವರೆಗೆ ಮುಂದುವರೆಯುತ್ತವೆ ಎಂದು ಸತ್ಪತಿ ಪ್ರತಿಪಾದಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸಂಶೋಧನೆಯನ್ನು ಏಕೆ ನಿಲ್ಲಿಸಲಾಯಿತು ಎಂದೂ ಅವರು ಪ್ರಶ್ನಿಸಿದ್ದಾರೆ.