ಒಟ್ಟಾವ: ಕೆನಡಾದ ಬ್ರಾಮ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಆವರಣದಲ್ಲಿ ಭಕ್ತರ ಮೇಲೆ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ದಾಳಿ ಮಾಡಿದ್ದಾರೆ.
ಕೆನಡಾ ಸಂಸದ, ಕರ್ನಾಟಕ ಮೂಲದ ಚಂದ್ರ ಆರ್ಯ ಅವರು ವಿಡಿಯೊವನ್ನು ಹಂಚಿಕೊಂಡಿದ್ದು, 'ಮಿತಿ ಮೀರಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರೂ ಈ ಘಟನೆಯನ್ನು ಖಂಡಿಸಿದ್ದಾರೆ. 'ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರ ಕೃತ್ಯವನ್ನು ಒಪ್ಪಲಾಗದು. ಕೆನಡಾದ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಮುಕ್ತಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕು ಇದೆ' ಎಂದು ಹೇಳಿದ್ದಾರೆ. ಹಾಗೆಯೇ, ಸಮುದಾಯದ ರಕ್ಷಣೆ ಹಾಗೂ ಪ್ರಕರಣದ ತನಿಖೆ ನಿಟ್ಟಿನಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಿದ ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಭಾರತ ಹಾಗೂ ಕೆನಡಾ ನಡುವಣ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಹೊತ್ತಿನಲ್ಲೇ, ಈ ಆಘಾತಕಾರಿ ಘಟನೆ ನಡೆದಿದೆ.
2023ರ ಜೂನ್‌ನಲ್ಲಿ ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರದ ಬಗ್ಗೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಪ್ರಧಾನಿ ಟ್ರುಡೊ ವರ್ಷದ ಹಿಂದೆ ಹೇಳಿದ್ದರು.
ಏತನ್ಮಧ್ಯೆ, ಸಿಖ್ ಪ್ರತ್ಯೇಕತಾವಾದಿಗಳ ಹತ್ಯೆ ಸಂಚಿನಲ್ಲಿ ಅಮಿತ್ ಶಾ ಅವರ ಕೈವಾಡವಿದೆ ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್ ಮಾರಿಸನ್ ಇತ್ತೀಚೆಗೆ ಆರೋಪಿಸಿದ್ದಾರೆ.
ಇವುಗಳ ಪರಿಣಾಮವಾಗಿ ರಾಜತಾಂತ್ರಿಕ ಸಂಬಂಧ ಜಟಿಲಗೊಂಡಿರುವುದರ ನಡುವೆ, ಕೆನಡಾ ಸರ್ಕಾರವು ಸೈಬರ್ ಬೆದರಿಕೆಯೊಡ್ಡುವ ವಿರೋಧಿ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಕಳೆದ ವಾರ ಸೇರಿಸಿದೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.