ಚೆನ್ನೈ: ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಜ್ಞ ವೈದ್ಯರೊಬ್ಬರಿಗೆ ಮಹಿಳಾ ರೋಗಿಯ ಪುತ್ರ ಚಾಕುವಿನಿಂದ ಇರಿದ ಘಟನೆ ಖಂಡಿಸಿ ವೈದ್ಯರು ತಮಿಳುನಾಡಿನಾದ್ಯಂತ ಗುರುವಾರ ಪ್ರತಿಭಟನೆ ನಡೆಸಿದರು. ವೈದ್ಯಕೀಯ ವೃತ್ತಿಪರರಿಗೆ ಸುರಕ್ಷತೆ ಒದಗಿಸಬೇಕು ಎಂದೂ ಒತ್ತಾಯಿಸಿದರು.
ಚೆನ್ನೈ: ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಜ್ಞ ವೈದ್ಯರೊಬ್ಬರಿಗೆ ಮಹಿಳಾ ರೋಗಿಯ ಪುತ್ರ ಚಾಕುವಿನಿಂದ ಇರಿದ ಘಟನೆ ಖಂಡಿಸಿ ವೈದ್ಯರು ತಮಿಳುನಾಡಿನಾದ್ಯಂತ ಗುರುವಾರ ಪ್ರತಿಭಟನೆ ನಡೆಸಿದರು. ವೈದ್ಯಕೀಯ ವೃತ್ತಿಪರರಿಗೆ ಸುರಕ್ಷತೆ ಒದಗಿಸಬೇಕು ಎಂದೂ ಒತ್ತಾಯಿಸಿದರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ತಮಿಳುನಾಡು ಸರ್ಕಾರಿ ವೈದ್ಯರ ಸಂಘದ ಸದಸ್ಯರು ನಡೆಸಿದ ಮುಷ್ಕರದಿಂದ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡುವ ವೈದ್ಯಕೀಯ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಬುಧವಾರ ಹೊರ ರೋಗಿ ಕೊಠಡಿಯಲ್ಲಿ ರೋಗಿಯೊಬ್ಬರ ಪುತ್ರನಿಂದ ಇರಿತಕ್ಕೆ ಒಳಗಾದ ಕಲೈಗ್ನರ್ ಸೆಂಟಿನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ (ಕೆಸಿಎಸ್‌ಎಸ್‌ಎಚ್) ಡಾ. ಬಾಲಾಜಿ ಜಗನ್ನಾಥನ್ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.
ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ ಅವರು ಬಾಲಾಜಿ ಜಗನ್ನಾಥನ್ ಅವರನ್ನು ಗುರುವಾರ ಬೆಳಿಗ್ಗೆ ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 'ಡಾ.ಬಾಲಾಜಿ ಅವರು ಚೇತರಿಸಿಕೊಳ್ಳುತ್ತಿದ್ದು, ವೈದ್ಯಕೀಯ ಪರೀಕ್ಷೆಯ ನಂತರ ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ' ಎಂದು ತಿಳಿಸಿದರು.
' ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳು ಮತ್ತು ತಾಲ್ಲೂಕು ಆಸ್ಪತ್ರೆಗಳು ರೋಗಿಗಳ ಪರಿಚಾರಕರಿಗೆ ತಾತ್ಕಾಲಿಕ ಗುರುತಿನ ಟ್ಯಾಗ್‌ಗಳನ್ನು ಒದಗಿಸುತ್ತಿವೆ. ರೋಗಿಗಳ ಪರಿಚಾರಕರಿಗೆ ನಾಲ್ಕು ಬಣ್ಣದ ಟ್ಯಾಗ್ ನೀಡುವ ವ್ಯವಸ್ಥೆಯನ್ನು ಅಕ್ಟೋಬರ್ ಆರಂಭದಲ್ಲಿ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಪರಿಚಯಿಸಲಾಯಿತು. ಇದನ್ನು ಇತರ ಸರ್ಕಾರಿ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು' ಎಂದು ಸಚಿವರು ಇದೇ ವೇಳೆ ತಿಳಿಸಿದರು.
'ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿಭಟನೆ ನಡೆಸಲಾಯಿತು. ರೋಗಿಗಳ ಮೇಲೆ ಪರಿಣಾಮ ಉಂಟು ಮಾಡುವ ಉದ್ದೇಶವಿರಲಿಲ್ಲ. ರೋಗಿಗಳಿಗೆ ಎಲ್ಲ ರೀತಿಯ ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಗುತ್ತಿದೆ' ಎಂದು ಕೆಸಿಎಸ್‌ಎಸ್‌ಎಚ್ ನಿರ್ದೇಶಕ ಡಾ. ಎಲ್.ಪಾರ್ಥಸಾರಥಿ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.